ಬಾರ್ಮರ್ (ರಾಜಸ್ಥಾನ): ಆದಾಯ ತೆರಿಗೆ ಇಲಾಖೆಯು ಟ್ಯಾಕ್ಸಿ ಡ್ರೈವರ್‌ವೊಬ್ಬರಿಗೆ 5 ಕೋಟಿ ರೂ. ದಂಡ ಕಟ್ಟುವಂತೆ ನೋಟಿಸ್ ನೀಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಬಾರ್ಮರ್‌ನ ಪನೋರಿಯಾ ಗ್ರಾಮದ ಗಜೇದನ್ ಚರಣ್ (35) ಅವರು 32.63 ಕೋಟಿ ರೂ.ಗಳ ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ, 4.89 ಕೋಟಿ ರೂ. ದಂಡ ಕಟ್ಟುವಂತೆ ನೋಟಿಸ್ ನೀಡಲಾಗಿದೆ.
ಈ ಕುರಿತು ಈ ಟಿವಿ ಭಾರತದೊಂದಿಗೆ ಮಾತನಾಡಿದ ಚರಣ್, ನನಗೆ ಗೊತ್ತಿಲ್ಲದೆಯೇ ಯಾರೋ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಬಳಸಿಕೊಂಡು ಸಂಸ್ಥೆಯೊಂದರಲ್ಲಿ ಹೆಸರು ನೋಂದಾಯಿ ವ್ಯವಹಾರ ನಡೆಸಿದ್ದಾರೆ. ಗ್ರಾಮದಲ್ಲಿ ಟ್ಯಾಕ್ಸಿ ಓಡಿಸುವ ಸಾಮಾನ್ಯ ವ್ಯಕ್ತಿ ನಾನು. ತಿಂಗಳಿಗೆ 10,000 ರೂ. ಸಂಪಾದಿಸುತ್ತೇನೆ. 5 ಕೋಟಿ ರೂ. ಆದಾಯ ತೆರಿಗೆಯನ್ನು ಹೇಗೆ ಪಾವತಿಸುವುದು?. 32.63 ಕೋಟಿ ರೂ. ವ್ಯಾಪಾರ ವಹಿವಾಟಿನ ಬಗ್ಗೆ ಯಾವುದೇ ಸುಳಿವಿಲ್ಲ ಎಂದು ಹೇಳಿದರು.
ಇನ್ನು ಡಾಕ್ಯುಮೆಂಟ್ ವಂಚನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.