ಜೈಸಲ್ಮೇರ್ (ರಾಜಸ್ಥಾನ): ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖ್ರಾನ್‌ನಲ್ಲಿ ಸೇನೆಯ ಹೊಸ ಸಮವಸ್ತ್ರಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಭಾರತೀಯ ಸೇನೆಯ ಗುಪ್ತಚರ ಘಟಕವು ಭಾನುವಾರ ಬಂಧಿಸಿದೆ. ಕಾರಿನಲ್ಲಿ ಸೇನೆಯ ಹೊಸ ಮಾದರಿಯ ಸಮವಸ್ತ್ರಗಳು, ಹೆಲ್ಮೆಟ್‌ಗಳು, ಶೂಗಳು, ಬೆಲ್ಟ್‌ಗಳು ಸೇರಿದಂತೆ ಇತರ ವಸ್ತುಗಳು ಪತ್ತೆಯಾಗಿವೆ.
ಪೋಖ್ರಾನ್‌ನ ನಾಚನಾ ಫಾಂಟೆ ಬಳಿ ಸಂಚರಿಸುತ್ತಿದ್ದ ಆಲ್ಟೋ ಕಾರನ್ನು ಭದ್ರತಾ ಪಡೆಗಳು ತಡೆದು ತಪಾಸಣೆ ನಡೆಸಿವೆ. ಈ ವೇಳೆ, ಕಾರಿನಲ್ಲಿ ಹೊಸ ಸಮವಸ್ತ್ರಗಳು ಸೇರಿ ಸೇನೆಗೆ ಸಂಬಂಧಿಸಿದ ಹಲವು ವಸ್ತುಗಳು ಪತ್ತೆಯಾಗಿವೆ. ಅಂತೆಯೇ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಎಲ್ಲ ಆರೋಪಿಗಳು ಸಹ ರಾಜಸ್ಥಾನದ ನಿವಾಸಿಗಳೇ ಆಗಿದ್ದಾರೆ. ಆದರೆ, ಈ ಪ್ರದೇಶದಲ್ಲಿ ಹೊರಗಿನವರ ಪ್ರವೇಶ ಹಾಗೂ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಬಂಧಿತರು ಸೂರತ್‌ಗಢದ ಕೆಲವು ಅಂಗಡಿಗಳಿಂದ ಹೊಸ ಸಮವಸ್ತ್ರಗಳು ಹಾಗೂ ಇತರ ವಸ್ತುಗಳನ್ನು ಸಂಗ್ರಹಿಸಿ ಜೈಸಲ್ಮೇರ್‌ಗೆ ತೆರಳುತ್ತಿದ್ದರು.
ಏನೆಲ್ಲಾ ಪತ್ತೆ?: ಆರೋಪಿಗಳಿಂದ ವಶಕ್ಕೆ ಪಡೆದ ಸೇನೆಗೆ ಸಂಬಂಧಿಸಿದ ವಸ್ತುಗಳಲ್ಲಿ 91 ಸೇನಾ ಹೊಸ ಮಾದರಿಯ ಸಮವಸ್ತ್ರಗಳು ಇವೆ. ಅಲ್ಲದೇ, ಕಾರ್ಗಿಲ್ ಚೆಕ್‌ನ ಎಂಟು ಸೇನಾ ಸಮವಸ್ತ್ರಗಳು, 46 ಸೇನಾ ಟೀ-ಶರ್ಟ್‌ಗಳು, ನಾಲ್ಕು ಸೇನಾ ಶೇವಿಂಗ್ ಕಿಟ್‌ಗಳು, 30 ಜೋಡಿ ಸಾಕ್ಸ್ ಹಾಗೂ ಶೂಗಳು, ಐದು ಯುದ್ಧ ಕ್ಯಾಪ್ಗಳು ಮತ್ತು 25 ಬೆಲ್ಟ್‌ಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಸೇನಾ ಸಮವಸ್ತ್ರ ಮಾರಾಟ ನಿಷೇಧ: ಮತ್ತೊಂದೆಡೆ, ಸೇನಾ ಸಮವಸ್ತ್ರಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಈ ಸಮವಸ್ತ್ರಗಳು ಎಲ್ಲಿಂದ ಬಂದವು?, ಇವುಗಳನ್ನು ಎಲ್ಲಿಂದ ಖರೀದಿಸಲಾಗಿದೆ ಎಂದು ಭದ್ರತಾ ಪಡೆಗಳು ತನಿಖೆ ನಡೆಸುತ್ತಿವೆ. ಜೊತೆಗೆ ಈ ಸಮವಸ್ತ್ರಗಳನ್ನು ಎಲ್ಲಿ ತಯಾರಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಜೈಸಲ್ಮೇರ್‌ನ ತಂಡದೊಂದಿಗೆ ಸೂರತ್‌ಗಢ್ ಮತ್ತು ಗಂಗಾನಗರದ ಸೇನಾ ಗುಪ್ತಚರ ಘಟಕಗಳು ತನಿಖೆ ಕೈಗೊಂಡಿವೆ.
ಈಗಾಗಲೇ ನಾಲ್ವರು ಆರೋಪಿಗಳನ್ನು ಸೇನಾ ಗುಪ್ತಚರ ಘಟಕವು ವಿಚಾರಣೆ ನಡೆಸಿ, ನಾಚನಾ ಪೊಲೀಸರಿಗೆ ಹಸ್ತಾಂತರಿಸಿದೆ. ಜೊತೆಗೆ ವಶಪಡಿಸಿಕೊಂಡ ಕಾರನ್ನೂ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದೀಗ ಈ ಕುರಿತಂತೆ ಪೊಲೀಸರು ಕೂಡ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸೇನೆಯ ಹೊಸ ಸಮವಸ್ತ್ರಗಳ ಸಾಗಾಟದ ಬಗ್ಗೆ ಎಲ್ಲ ಆಯಾಮಗಳಿಂದ ವಿಚಾರಣೆ ನಡೆಸುತ್ತಿದ್ದೇವೆ. ಈ ವಿಚಾರಣೆ ಪೂರ್ಣಗೊಂಡ ನಂತರವೇ ಸೇನಾ ಸಮವಸ್ತ್ರಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೇಗೆ ಸಾಗಿಸಲಾಯಿತು ಎಂಬುದು ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Israel-Hamas fighting: ಅಕ್ಟೋಬರ್ 14 ರ ವರೆಗೆ ಇಸ್ರೇಲ್ಗೆ ಏರ್ ಇಂಡಿಯಾ ವಿಮಾನ ಹಾರಾಟ ರದ್ದು