ಜೈಪುರ (ರಾಜಸ್ಥಾನ): 2022 ರ ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿದೆ. ರಾಜಸ್ಥಾನದ ಜೈಪುರದ ಸಿವಿಲ್ ಲೈನ್ಸ್‌ನಲ್ಲಿರುವ ದೋಟಸಾರ ಅವರ ಅಧಿಕೃತ ನಿವಾಸದ ಮೇಲೆ ಇಡಿ ದಾಳಿ ಮಾಡಿದೆ.
ನವೆಂಬರ್ 25 ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಇದಕ್ಕಾಗಿ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ನಿರತವಾಗಿವೆ, ಇದೇ ವೇಳೆ ಇಡಿ ದಾಳಿ ಮಾಡಿರುವುದು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಹಜವಾಗೇ ಈ ದಾಳಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಸಂಬಂಧ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಏತನ್ಮಧ್ಯೆ ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ರಾಜಸ್ಥಾನದ ಸುಮಾರು ಹನ್ನೆರಡು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ದಿನೇಶ್ ಖೋಡಾನಿಯಾ, ಅಶೋಕ್ ಕುಮಾರ್ ಜೈನ್, ಸ್ಪೂರ್ಧಾ ಚೌಧರಿ, ಸುರೇಶ್ ಢಾಕಾ ಮತ್ತು ಇತರ ವ್ಯಕ್ತಿಗಳಿಗೆ ಸೇರಿದ ಏಳು ವಸತಿ ಆವರಣಗಳಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಶುಕ್ರವಾರ ಈ ಬಗ್ಗೆ ಶೋಧ ನಡೆಸಲಾಗಿದ್ದು, ಕಾರ್ಯಾಚರಣೆ ವೇಳೆ, ವಿವಿಧ ದಾಖಲೆಗಳು, ಆಸ್ತಿಗಳ ಮಾರಾಟ ಪತ್ರಗಳ ಪ್ರತಿಗಳು, ಎಲೆಕ್ಟ್ರಾನಿಕ್ ಸಾಧನಗಳು ಮತ್ತು 24 ಲಕ್ಷ ರೂಪಾಯಿ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಇಡಿ' ತನ್ನ ಎಕ್ಸ್' ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ಕೂಡಾ ನೀಡಿದೆ.
ರಾಜಸ್ಥಾನದಲ್ಲಿ ನಡೆದ ಪೇಪರ್ ಲೀಕ್ ಪ್ರಕರಣದಲ್ಲಿ ರಾಜಸ್ಥಾನ ಲೋಕಸೇವಾ ಆಯೋಗದ ಸದಸ್ಯ ಬಾಬುಲಾಲ್ ಕಟಾರಾ ಮತ್ತು ಅನಿಲ್ ಕುಮಾರ್ ಮೀನಾ ಅವರನ್ನು ಪಿಎಂಎಲ್‌ಎ ನಿಬಂಧನೆಗಳ ಅಡಿ ಇಡಿ ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಿತ್ತು. ಜೈಪುರದ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಮುಂದೆ ಕಟಾರಾ ಮತ್ತು ಮೀನಾ ಅವರನ್ನು ಹಾಜರುಪಡಿಸಿದ ಇಡಿ, ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದೆ.
ಇಡಿ ಆರೋಪ ಏನು?: ಡಿಸೆಂಬರ್ 21, ಡಿಸೆಂಬರ್ 22 ಮತ್ತು ಡಿಸೆಂಬರ್ 24, 2022 ರಂದು ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ನಡೆಸಬೇಕಿದ್ದ ಹಿರಿಯ ಶಿಕ್ಷಕರ ಗ್ರೇಡ್ II ಸ್ಪರ್ಧಾತ್ಮಕ ಪರೀಕ್ಷೆ, 2022 ರ ಸಾಮಾನ್ಯ ಜ್ಞಾನದ ಪ್ರಶ್ನೆ ಪತ್ರಿಕೆಯನ್ನು ಕಟಾರಾ ಅವರು ಸೋರಿಕೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ಹೇಳಿಕೊಂಡಿದೆ.
ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಅನಿಲ್ ಕುಮಾರ್ ಮೀನಾ ಅವರಿಗೆ ಕಟಾರಾ ಮಾರಾಟ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ. ಇದಲ್ಲದೇ, ಮೀನಾ ಅವರು ಸೋರಿಕೆಯಾದ ಪೇಪರ್‌ಗಳನ್ನು ಭೂಪೇಂದ್ರ ಸರನ್, ಸುರೇಶ್ ಢಾಕಾ ಮತ್ತು ಸಿಂಡಿಕೇಟ್‌ನ ಇತರ ಸದಸ್ಯರಿಗೆ ಸರಬರಾಜು ಮಾಡಿದರು ಎಂದು ಇಡಿ ಹೇಳಿದ್ದು, ಅದನ್ನು ಪ್ರತಿ ಅಭ್ಯರ್ಥಿಗೆ 8 ರಿಂದ 10 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು ಎಂದು ಇಡಿ ತನ್ನ ಆರೋಪಪಟ್ಟಿಯಲ್ಲಿ ದಾಖಲಿಸಿದೆ ಎಂದು ತಿಳಿದು ಬಂದಿದೆ.
ಈ ವರ್ಷದ ಜೂನ್ ಆರಂಭದಿಂದಲೇ ಇಡಿ ಆರೊಪಿಗಳಿಗೆ ಸೇರಿದ 15 ಆಸ್ತಿಗಳ ಮೇಲೆ ದಾಳಿ ನಡೆಸಿ, ಹಲವು ಲಿಖಿತ ದಾಖಲೆಗಳು ಮತ್ತು ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಬಾಬುಲಾಲ್ ಕತಾರ, ಅನಿಲ್ ಮೀನಾ ಮತ್ತು ಇತರರಿಂದ ಸರಿಸುಮಾರು 3.11 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿಕೊಂಡಿದೆ. (ANI)
ವೈಭವ ಗೆಹ್ಲೋಟ್‌ಗೆ ಸಮನ್ಸ್- ರಾಜಸ್ಥಾನ ಸಿಎಂ ಟ್ವೀಟ್: ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷರ ನಿವಾಸದ ಮೇಲೆ ಇಡಿ ದಾಳಿ ನಡುವೆ ಸಿಎಂ ಪುತ್ರ ವೈಭವ ಗೆಹ್ಲೋಟ್‌ಗೆ ಸಮನ್ಸ್ ಬಂದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ನನ್ನ ಮಗ ವೈಭವ್ ಗೆಹ್ಲೋಟ್‌ಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಅವರು ತುರ್ತು ಸುದ್ದಿಗೋಷ್ಠಿ ಕೂಡಾ ಕರೆದಿದ್ದಾರೆ. ಇನ್ನು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಕೂಡಾ ಟ್ವೀಟ್ ಮಾಡಿದ್ದು ಸತ್ಯಮೇವ ಜಯತೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ಇದನ್ನು ಓದಿ: ಪಡಿತರ ವಿತರಣೆ ಅಕ್ರಮ ಪ್ರಕರಣ: ಸಚಿವ ಜ್ಯೋತಿಪ್ರಿಯ ಮಲಿಕ್ ಮನೆ ಮೇಲೆ ಇಡಿ ದಾಳಿ