ಜೈಪುರ್ (ರಾಜಸ್ಥಾನ): 2023-24ರ ಬಜೆಟ್ ಮಂಡನೆ ಸಂದರ್ಭದಲ್ಲಿ ಅದರ ಬದಲಾಗಿ ಹಿಂದಿನ ವರ್ಷದ ಬಜೆಟ್‌ನ ಅಂಶಗಳನ್ನು ಓದಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಡವಟ್ಟು ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಪ್ರಮಾದದಿಂದ ಕೆಲಹೊತ್ತು ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಮಂಡನೆಗೂ ಮುನ್ನವೇ ಬಜೆಟ್ ಸೋರಿಕೆಯಾಗಿದೆ ಎಂದು ಬಿಜೆಪಿ ಆರೋಪಿಸಿದ್ದರಿಂದ ಹಾಗೂ ಇದೇ ಕಾರಣಕ್ಕೆ ಬಜೆಟ್ ಬೇರೊಂದು ದಿನ ಮಂಡನೆ ಮಾಡಬೇಕೆಂಬ ಬೇಡಿಕೆಯ ಕಾರಣದಿಂದ ಸದನ ಎರಡು ಬಾರಿ ಮುಂದೂಡಲಾಯಿತು.
ಬಜೆಟ್ ಮಂಡನೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸದನವನ್ನು ಮೊದಲು ಅರ್ಧ ಗಂಟೆ ಮತ್ತು ನಂತರ 15 ನಿಮಿಷಗಳ ಕಾಲ ಮುಂದೂಡಲಾಯಿತು. ಮೊದಲ ಬಾರಿಗೆ ಸದನವನ್ನು ಮುಂದೂಡಿದ ನಂತರ ಸಭಾಪತಿ ಸಿ.ಪಿ.ಜೋಶಿ ಅವರು 11 ರಿಂದ 11.42 ರವರೆಗೆ ಕಲಾಪವನ್ನು ರದ್ದುಗೊಳಿಸಿದರು. ನಡೆದ ಘಟನೆ ದುರದೃಷ್ಟಕರ. ಮಾನವ ದೋಷಗಳು ಸಂಭವಿಸುತ್ತವೆ ಮತ್ತು ಸರಿಪಡಿಸಲ್ಪಡುತ್ತವೆ ಎಂದು ಅವರು ಹೇಳಿದರು.
ಎರಡನೆ ಬಾರಿ ಸದನ ಮುಂದೂಡಿದ ನಂತರ ಸದನ ಮತ್ತೆ ಸಮಾವೇಶಗೊಂಡಾಗ ಮಾತನಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ನಡೆದ ಘಟನೆಯ ಬಗ್ಗೆ ನನಗೆ ವಿಷಾದವಿದೆ. ಬಜೆಟ್ನಲ್ಲಿ ತಪ್ಪಾಗಿ ಹೆಚ್ಚುವರಿ ಪುಟ ಸೇರಿಸಲಾಗಿತ್ತು. ಇದು ಮಾನವ ದೋಷ ಎಂದು ಹೇಳಿದರು. ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದಾಗ ಕೂಡ ತಪ್ಪು ಅಂಕಿಅಂಶಗಳನ್ನು ನೀಡಲಾಗಿತ್ತು ಮತ್ತು ಅದನ್ನು ಸರಿಪಡಿಸಲಾಗಿತ್ತು ಎಂದು ಅವರು ಹೇಳಿದರು.
ಸದನದಲ್ಲಿ ಉಪಸ್ಥಿತರಿದ್ದ ವಸುಂಧರಾ ರಾಜೆ, ಗೆಹ್ಲೋಟ್ ಮಾಡಿರುವುದು ಸಂಪೂರ್ಣ ನಿರ್ಲಕ್ಷ್ಯ ಎಂದು ತಿರುಗೇಟು ನೀಡಿದರು. ಕೋಯಿ ಭಿ ಸಿಎಂ ಈಸ್ ತರಹ್ ಸೇ ಕಾಗಜ್ ನಹಿಂ ಲಾತೇ. ಐಸಾ ಹೋಗಾ ತೋ ರಾಜಸ್ಥಾನ ಕ್ಯಾ ಹೋಗಾ (ಯಾವ ಮುಖ್ಯಮಂತ್ರಿಯೂ ಈ ರೀತಿಯ ಕಾಗದ ಪತ್ರಗಳೊಂದಿಗೆ ಬರುವುದಿಲ್ಲ. ಮುಖ್ಯಮಂತ್ರಿ ಈ ರೀತಿ ಮಾಡಿದರೆ ರಾಜ್ಯದ ಗತಿ ಏನಾಗುತ್ತದೆ) ಎಂದು ಕುಟುಕಿದರು. ಕೊನೆಗೂ ಮುಖ್ಯಮಂತ್ರಿಗಳ ಕ್ಷಮೆಯಾಚನೆಯ ನಂತರ ಗದ್ದಲ ಕೊನೆಗೊಂಡು ಬಜೆಟ್ ಭಾಷಣ ಪ್ರಾರಂಭವಾಯಿತು.
ಸದನದ ಘನತೆ ಮತ್ತು ಬಜೆಟ್‌ನ ಪಾವಿತ್ರ್ಯತೆ ಕಾಪಾಡುವಂತೆ ಸ್ಪೀಕರ್ ಪ್ರತಿಪಕ್ಷದ ಸದಸ್ಯರಿಗೆ ಸೂಚಿಸಿದರು. ಆದರೂ ಪ್ರತಿಪಕ್ಷ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ಪ್ರತಿಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಮಾತನಾಡಿ, ಬಜೆಟ್ ಪ್ರತಿ ಬಚ್ಚಿಡಲಾಗಿದೆ ಮತ್ತು ಅದು ಹಣಕಾಸು ಸಚಿವರ ಬಳಿ ಉಳಿದಿದೆ ಎಂದು ಆರೋಪಿಸಿದರು. ಸದನದ ಘನತೆ ಕಾಪಾಡಲು ಬಜೆಟ್ ಮುಂದೂಡಿ ಹೊಸ ದಿನಾಂಕ ನಿಗದಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರತಿಪಕ್ಷದ ಸದಸ್ಯರನ್ನು ತಮ್ಮ ಪೀಠಕ್ಕೆ ಹಿಂತಿರುಗುವಂತೆ ವಿನಂತಿಸಿದರು. ಆದರೂ ಗದ್ದಲ ಮುಂದುವರೆಯಿತು. ಪ್ರತಿಭಟನೆ ಮುಂದುವರಿದಾಗ ಸ್ಪೀಕರ್ 12.13ಕ್ಕೆ 15 ನಿಮಿಷಗಳ ಕಾಲ ಎರಡನೇ ಬಾರಿಗೆ ಸದನವನ್ನು ಮುಂದೂಡಿದರು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಇದು ಕೊನೆಯ ಬಜೆಟ್ ಆಗಿದೆ.
ಇದನ್ನೂ ಓದಿ: 'ಜನರಿಗೆ ಬಜೆಟ್ ಅಂಶಗಳನ್ನು ತಲುಪಿಸಿ': ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ