ಚಿತ್ತೋರ್‌ಗಢ್(ರಾಜಸ್ಥಾನ): ಮದುವೆ ಅಂದ್ರೆ ಸಡಗರ, ಸಂಭ್ರಮ. ಪಾರ್ಟಿ, ಫೋಟೋಶೂಟ್, ಹಾಡು, ಕುಣಿತ, ಬಗೆ ಬಗೆಯ ಖಾದ್ಯಗಳು, ಕುಟುಂಬಸ್ಥರು, ಸಂಬಂಧಿಕರೆಲ್ಲಾ ಭಿನ್ನ ವಿಭಿನ್ನವಾದ ಉಡುಪುಗಳನ್ನು ಧರಿಸಿ ಸಕತ್ ಎಂಜಾಯ್ ಮಾಡುತ್ತಾರೆ. ಕೆಲವರು ತಮ್ಮ ಮನೆಯಲ್ಲೇ ಮದುವೆಯಾದ್ರೆ ಇನ್ನೂ ಕೆಲವರು ಕಲ್ಯಾಣ ಮಂಟಪ, ಅರಮನೆ, ಕೋಟೆಗಳಲ್ಲಿ ನಿಸರ್ಗದ ಮಧ್ಯೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಆದ್ರೆ, ಇಲ್ಲೊಂದು ಜೋಡಿ ಮಾತ್ರ ಆಸ್ಪತ್ರೆಯಲ್ಲಿ ಹಸೆಮಣೆ ಏರಿದೆ.
ಭಾನುವಾರ ಹೌದು, ಮದುವೆಯ ದಿನದಂದು ವಧುವಿಗೆ ಮೂಳೆ ಮುರಿದ ಕಾರಣ ರಾಜಸ್ಥಾನದ ಕೋಟಾ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಜೋಡಿಯ ವಿವಾಹವನ್ನು ಭಾನುವಾರ ನೆರವೇರಿಸಲಾಯಿತು. ಪಂಕಜ್, ಮಧು ಚಿಕಿತ್ಸಾಲಯದಲ್ಲಿ ವಿವಾಹವಾದ ಜೋಡಿ. ಕುಟುಂಬದ ಆಪ್ತ ಸದಸ್ಯರ ಸಮ್ಮುಖದಲ್ಲಿ ವರ ಪಂಕಜ್ ಮದುವೆ ವಿಧಿ ವಿಧಾನಗಳಾದ ಸಿಂಧೂರ ಹಚ್ಚುವುದು ಸೇರಿದಂತೆ ವಿವಿಧ ಶಾಸ್ತ್ರಗಳನ್ನು ಮಾಡಿದರು.
ಇದನ್ನೂ ಓದಿ: ಕಲಿತ ಕಾಲೇಜಿನಲ್ಲಿ ಧರ್ಮ ಮೀರಿ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿ- ವಿಡಿಯೋ
ಚಿತ್ತೋರ್‌ಗಢ ಜಿಲ್ಲೆಯ ರಾವತ್‌ಭಟ ನಿವಾಸಿಯಾಗಿರುವ ಮಧು, ಮದುವೆ ಸ್ಥಳಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ಮೆಟ್ಟಿಲುಗಳಿಂದ ಜಾರಿ ಬಿದ್ದು ಗಾಯಗೊಂಡಿದ್ದರು. ಕೂಡಲೇ ಆಕೆಯನ್ನು ಕೋಟಾದ ಆಸ್ಪತ್ರೆಗೆ ಸಾಗಿಸಲಾಯಿತು. ವರನ ಮನೆಯವರಿಗೆ ಸಂದೇಶ ತಲುಪುವಷ್ಟರಲ್ಲಿ ವಿವಾಹ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೊರಟಿದ್ದರು. ವಿಷಯ ತಿಳಿದ ಬಳಿಕ ಎರಡೂ ಕುಟುಂಬಸ್ಥರು ವಿವಾಹ ಮುಂದೂಡದೇ, ಸ್ಥಳ ಬದಲಾವಣೆ ಮಾಡಿ ಮಂಗಳ ಕಾರ್ಯ ನೆರವೇರಿಸಿದ್ದಾರೆ. ಪ್ರಸ್ತುತ ವಧು ನಗರದ ಎಸ್‌ಬಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದುವೆ ನಂತರ ನಡೆದ ಫೋಟೋಶೂಟ್ನಲ್ಲಿ ಮಧು ವಧುವಿನ ಉಡುಪನ್ನು ಧರಿಸಿದ್ದು, ಎರಡೂ ಕೈಗಳಿಗೆ ಬ್ಯಾಂಡೇಜ್ ಹಾಕಿರುವುದನ್ನು ಕಾಣಬಹುದು.
ಇದನ್ನೂ ಓದಿ: ಜೆಸಿಬಿ ಏರಿ ಮದುವೆ ಮಂಟಪಕ್ಕೆ ಬಂದ ವರ.. ಗಮನ ಸೆಳೆದ ವಿವಾಹ ಮೆರವಣಿಗೆ
ವಿವಾಹದ ಕುರಿತು ಮಾಹಿತಿ ನೀಡಿದ ಪಂಕಜ್ ಅವರ ಸೋದರ ಮಾವ ರಾಕೇಶ್ ರಾಥೋಡ್, "ಮಧು ಗಾಯಗೊಂಡ ಬಳಿಕ ನಮ್ಮ ಎರಡೂ ಕುಟುಂಬಗಳು ಮದುವೆ ಮುಂದುವರೆಸಲು ನಿರ್ಧರಿಸಿದೆವು. ನಂತರ, ಆಸ್ಪತ್ರೆಯ ಕೊಠಡಿಯೊಂದನ್ನು ಕಾಯ್ದಿರಿಸಿ, ಅಲ್ಲಿಯೇ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು. ಗಾಲಿ ಕುರ್ಚಿಯಲ್ಲಿ ಕುಳಿತಿದ್ದ ವಧುವಿಗೆ ವರ ಮಾಲೆ ಹಾಕಿ, ಮಂಗಳಸೂತ್ರವನ್ನು ಕಟ್ಟಿದ. ಮಧು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವವರೆಗೂ ಎರಡೂ ಕುಟುಂಬದವರು ಆಕೆಯನ್ನು ನೋಡಿಕೊಳ್ಳುತ್ತಾರೆ" ಎಂದರು.
ಇದನ್ನೂ ಓದಿ: ವಿವಾಹ ಮಹೋತ್ಸವದಲ್ಲಿ ಚಂಡೆ ಬಾರಿಸಿ ಸಂಭ್ರಮಿಸಿದ ಮಧುಮಗಳು.. ವಿಡಿಯೋ ನೋಡಿ