ಹೈದರಾಬಾದ್: ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ತೆಲಂಗಾಣಕ್ಕೆ ವರುಣ ತಂಪೆರೆದಿದ್ದಾನೆ. ಇಂದು ಮುಂಜಾನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿದ್ದು ಕೆಲವೆಡೆ ಅವಾಂತರವನ್ನೂ ಸೃಷ್ಟಿಸಿದ್ದಾನೆ. ಹೈದರಾಬಾದ್ ನಗರವು ಮಳೆ ನೀರಿನಿಂದ ಆವೃತವಾಗಿದ್ದು ಕೆೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಬಹುತೇಕ ರಸ್ತೆಗಳು ಹೊಳೆಯಂತಾಗಿದ್ದು, ವಿದ್ಯುತ್ ಕಡಿತಗೊಂಡು ಜನರು ಪರದಾಡಿದರು.
ಹೈದರಾಬಾದ್‌ನ ಖೈರತಾಬಾದ್, ಅಮೀರ್‌ಪೇಟ್, ಪಂಜಗುಟ್ಟ, ಸಿಕಂದರಾಬಾದ್, ಮರೇಡ್‌ಪಲ್ಲಿ, ಚಿಲಕಲಗುಡ, ಬೋಯಿನಪಲ್ಲಿ, ತಿರುಮಲಗಿರಿ, ಅಲ್ವಾಲ್, ಬೇಗಂಪೇಟ್, ಸೈದಾಬಾದ್, ಚಂಪಾಪೇಟ, ಸರೂರ್ ನಗರ, ಕೊತ್ತಪೇಟಾ, ಎಲ್‌ಬಿ ನಗರ, ದಿಲ್‌ಸುಖ್‌ನಗರ, ನಾಗೋಲ್, ಚೈತನ್ಯಪುರಿ ಮತ್ತು ವನಸ್ಥಳಿಪುರಂ ಪ್ರದೇಶಗಳಲ್ಲಿ ಮಳೆಯಾಗಿದೆ. ಜಗದ್ಗಿರಿಗುಟ್ಟಾ, ಕೂಕಟ್‌ಪಲ್ಲಿ, ಕುಶೈಗುಡ, ಇಸಿಐಎಲ್, ಕಾಪ್ರಾ ಭಾಗದಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿದಿದೆ. ಶಿವರಾಮಪಳ್ಳಿ, ಯೂಸುಫ್‌ಗುಡ, ನಾರಾಯಣಗೌಡ, ಹಿಮಾಯತ್‌ನಗರದಲ್ಲಿ ಸಹ ವರುಣ ಅಬ್ಬರಿಸಿದ್ದು, ಮಿಯಾಪುರ, ರಾಜೇಂದ್ರನಗರ, ಅತ್ತಾಪುರ, ಕಿಸ್ಮತ್‌ಪುರ ಸುತ್ತಮುತ್ತಲಿನ ರಸ್ತೆಗಳು ಜಲಾವೃತಗೊಂಡಿದ್ದು ಕಂಡುಬಂತು. ಯಾದಾದ್ರಿ, ಸಿದ್ದಿಪೇಟೆ, ಕರೀಂನಗರ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ತೆಲಂಗಾಣದ ಬಹುತೇಕ ಕಡೆ ಬೆಳೆ ಮುಳುಗಡೆಯಾಗಿದ್ದು, ಒಂದೇ ವಾರದಲ್ಲಿ ಫಸಲು ಕಟಾವ್ ಮಾಡಬಹುದೆಂದು ಭಾವಿಸಿದ್ದ ರೈತರು ಕಂಗಾಲಾಗಿದ್ದಾರೆ. ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತ ಕೊಚ್ಚಿ ಹೋಗಿರುವ ವರದಿಯಾಗಿದೆ. ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಹಾಗಾಗಿ, ಜನರು ಮತ್ತು ರೈತರು ಸುರಕ್ಷಿತವಾಗಿರಬೇಕೆಂದು ಹೈದರಾಬಾದ್ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ವಿಡಿಯೋ: ತಮಿಳುನಾಡಿನಲ್ಲಿ 'ಮೀನು ಬೇಟೆ' ಹಬ್ಬ ಪ್ರಾರಂಭ