ನವದೆಹಲಿ: ಪ್ರಯಾಣಿಕರ ಸೇವೆಗಳನ್ನು ಸಾಮಾನ್ಯಗೊಳಿಸುತ್ತಿರುವ ಭಾಗವಾಗಿ ಹಾಗೂ ಹಂತ ಹಂತವಾಗಿ ಪೂರ್ವ ಕೋವಿಡ್ ಮಟ್ಟಕ್ಕೆ ಹಿಂತಿರುಗಿಸುವ ರೈಲ್ವೆಯ ಪ್ರಯತ್ನಗಳ ಭಾಗವಾಗಿ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ (ಪಿಆರ್‌ಎಸ್) (Passenger Reservation System) ಅನ್ನು ಮುಂದಿನ ಏಳು ದಿನಗಳವರೆಗೆ ಆರು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ.
ನೈಋತ್ಯ ರೈಲ್ವೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಸಿಸ್ಟಮ್ ಡೇಟಾದ ಉನ್ನತೀಕರಣ ಮತ್ತು ಹೊಸ ರೈಲು ಸಂಖ್ಯೆಗಳ ನವೀಕರಣವನ್ನು ಸಕ್ರಿಯಗೊಳಿಸಲು ಈ ರೀತಿ ಮಾಡಲಾಗುತ್ತಿದೆಯಂತೆ. ಹಿಂದಿನ (ಹಳೆಯ ರೈಲು ಸಂಖ್ಯೆಗಳು) ಮತ್ತು ಪ್ರಸ್ತುತ ಪ್ರಯಾಣಿಕರ ಬುಕಿಂಗ್ ಡೇಟಾ ಸೇರಿದಂತೆ ಎಲ್ಲವನ್ನೂ ನವೀಕರಿಸಲಾಗುತ್ತದೆ. ಹಾಗೆ ಜನರಿಗೆ ತೊಂದರೆ ಆಗಬಾರದೆಂದು ಇದನ್ನು ರಾತ್ರಿ ಸಮಯದಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ನವೆಂಬರ್ 14 ಮತ್ತು 15 ರ ಮಧ್ಯರಾತ್ರಿಯಿಂದ ನವೆಂಬರ್ 20 ಮತ್ತು 21 ರ ರಾತ್ರಿಯವರೆಗೆ ಈ ಚಟುವಟಿಕೆಯನ್ನು ನಡೆಸಲಾಗುತ್ತದೆ. ಈ 6 ಗಂಟೆಗಳ ಅವಧಿಯಲ್ಲಿ ಯಾವುದೇ PRS ಸೇವೆಗಳು (ಟಿಕೆಟ್ ಕಾಯ್ದಿರಿಸುವಿಕೆ, ಕರೆಂಟ್ ಬುಕಿಂಗ್, ರದ್ದತಿ, ವಿಚಾರಣೆ ಸೇವೆಗಳು ಇತ್ಯಾದಿ) ಲಭ್ಯವಿರುವುದಿಲ್ಲ.
ಈ ಅವಧಿಯಲ್ಲಿ ರೈಲ್ವೆ ಸಿಬ್ಬಂದಿ ನಿಗದಿತ ಸಮಯದಲ್ಲಿ ರೈಲುಗಳು ಪ್ರಾರಂಭವಾಗುವಂತೆ ಮುಂಗಡ ಚಾರ್ಟ್ ಅನ್ನು ಖಚಿತಪಡಿಸಿಕೊಳ್ಳುತ್ತಾರೆ. PRS ಸೇವೆಗಳನ್ನು ಹೊರತುಪಡಿಸಿ 139 ಸೇವೆಗಳು ಸೇರಿದಂತೆ ಎಲ್ಲಾ ಇತರ ವಿಚಾರಣೆ ಸೇವೆಗಳು ಮುಂದುವರಿಯುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಪ್ರಯಾಣಿಕರ ಸೇವೆಗಳನ್ನು ಸಾಮಾನ್ಯಗೊಳಿಸುವ ಮತ್ತು ಮೇಲ್ದರ್ಜೆಗೇರಿಸುವ ಪ್ರಯತ್ನದಲ್ಲಿ ಸಚಿವಾಲಯವನ್ನು ಬೆಂಬಲಿಸುವಂತೆ ರೈಲ್ವೆ ಸಚಿವಾಲಯವು ಗ್ರಾಹಕರನ್ನು ವಿನಂತಿಸಿದೆ.