ಚೆನ್ನೈ: ಮಾಜಿ ಸಚಿವ ಸಿ. ವಿಜಯಭಾಸ್ಕರ್ ಮನೆ ಹಾಗೂ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಐಎಡಿಎಂಕೆ(AIADMK)ಯ ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಇಲಾಖೆ ಮೊಕದ್ದಮೆ ದಾಖಲಿಸಿದ್ದು, ಅಪಾರ ಆಸ್ತಿ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ವಿಜಯಭಾಸ್ಕರ್ ಮತ್ತು ಅವರ ಪತ್ನಿ ರಮ್ಯಾ ಅವರ ಆಸ್ತಿ-ಪಾಸ್ತಿ ಮೇಲೆ ಭ್ರಷ್ಟಾಚಾರ ನಿಗ್ರಹ ಇಲಾಖೆ ದಾಳಿ ನಡೆಸಿದೆ.
ಅಧಿಕಾರಿಗಳು ತಮಿಳುನಾಡಿನಾದ್ಯಂತ ಇರುವ ಅವರ ಮನೆಗಳು, ಕಚೇರಿಗಳು ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದ ದಾಳಿ ಆರಂಭವಾಗಿದೆ. ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ಕೊಯಮತ್ತೂರು, ತಿರುಚ್ಚಿ ಮತ್ತು ಪುದುಕೊಟ್ಟೈ ಸೇರಿದಂತೆ ಇವರು ಒಟ್ಟು 43 ಸ್ಥಳಗಳಲ್ಲಿ ಆಸ್ತಿ ಸಂಪಾದನೆ ಮಾದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇವರು ಶಾಸಕರಾಗಿದ್ದ ಅವಧಿಯಲ್ಲಿ 27,22,56,736 ರೂ.ಗಳಷ್ಟು ಆಸ್ತಿ ಗಳಿಸಿದ್ದಾರೆ ಎನ್ನಲಾಗ್ತಿದೆ. 2016 ರ ಚುನಾವಣಾ ಅಫಿಡವಿಟ್ನಲ್ಲಿ ವಿಜಯಭಾಸ್ಕರ್ ಅವರು ತಮ್ಮ ಹೆಸರಿನಲ್ಲಿ ಮತ್ತು ಅವರ ಪತ್ನಿಯರ ಹೆಸರಿನಲ್ಲಿರುವ ಒಟ್ಟು ಆಸ್ತಿ ರೂ.6,41,91,310 ಎಂದು ಘೋಷಣೆ ಮಾಡಿದ್ದರು. ಆದರೆ 2016 ರಿಂದ 21 ರ ವರೆಗೆ ಅಪಾರವಾದ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆ ಸತಿಪತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.