ರಾಯ್ಪುರ(ಛತ್ತೀಸ್ಗಢ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ತಿರುಚಿದ ವಿಡಿಯೋ ಪ್ರಸಾರ ಮಾಡಿದ ಆರೋಪ ಹೊತ್ತಿರುವ ಖಾಸಗಿ ನ್ಯೂಸ್ ಚಾನೆಲ್ನ ಆ್ಯಂಕರ್ ರೋಹಿತ್ ರಂಜನ್ ತಲೆ ಮರೆಸಿಕೊಂಡಿದ್ದಾರೆ ಎಂದು ಛತ್ತೀಸ್ಗಢ ಪೊಲೀಸರು ಘೋಷಿಸಿದ್ದಾರೆ.
ಕೆಲ ದಿನಗಳ ರಾಹುಲ್ ಗಾಂಧಿ ಕೇರಳದ ವಯನಾಡ್ನಲ್ಲಿ ತಮ್ಮ ಕಚೇರಿ ಮೇಲೆ ಎಸ್‌ಎಫ್‌ಐ ಕಾರ್ಯಕರ್ತರು ನಡೆಸಿದ್ದ ದಾಳಿ ಕುರಿತಾಗಿ ಮಾತನಾಡಿದ್ದರು. ಆದರೆ, ಈ ಹೇಳಿಕೆಯ ವಿಡಿಯೋ ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಹತ್ಯೆ ಬಗ್ಗೆ ಮಾತನಾಡಿರುವಂತೆ ಬಿಂಬಿಸಿ ರೋಹಿತ್ ರಂಜನ್ ನಿರೂಪಣೆ ಮಾಡುತ್ತಿದ್ದ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗಿತ್ತು. ಇದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಗಾಜಿಯಾಬಾದ್ನಲ್ಲಿರುವ ಚಾನೆಲ್ನ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ನಂತರ ಈ ತಪ್ಪಿನ ಬಗ್ಗೆ ಚಾನೆಲ್ ಕ್ಷಮೆಯಾಚಿಸಿತ್ತು.
ಇದೇ ಪ್ರಕರಣದಲ್ಲಿ ಪ್ರಕರಣ ದಾಖಲಿಸಿಕೊಂಡು ರೋಹಿತ್ ರಂಜನ್ ಅವರನ್ನು ಬಂಧಿಸಲು ಛತ್ತೀಸ್ಗಢನ ವಿಶೇಷ ಪೊಲೀಸರ ತಂಡ ಗಾಜಿಯಾಬಾದ್‌ಗೆ ಬಂದಿತ್ತು. ಆದರೆ, ಈ ಪ್ರಕರಣದ ಕುರಿತಾಗಿ ಪ್ರಕರಣವನ್ನೂ ದಾಖಲಿಸಿಕೊಂಡಿದ್ದ ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ರೋಹಿತ್ ರಂಜನ್ ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಆದರೆ, ಅಂದು ರಂಜನ್ ಅವರನ್ನು ಬಂಧಿಸದೇ ಬರೀಗೈಯಲ್ಲಿ ಮರಳಿದ್ದ ಛತ್ತೀಸ್ಗಢ ಪೊಲೀಸರು ಇದೀಗ ರಂಜನ್ ತಲೆ ಮರೆಸಿಕೊಂಡಿದ್ದಾರೆ ಪ್ರಕಟಿಸಿದ್ದಾರೆ. ಅಲ್ಲದೇ, ಈ ಬಗ್ಗೆ ನೋಟಿಸ್ವೊಂದನ್ನು ಜಾರಿ ಮಾಡಿ, ಜುಲೈ 12ರಂದು ಬೆಳಗ್ಗೆ 11 ಗಂಟೆಗೆ ರಾಯ್ಪುರ ಸಿವಿಲ್ ಲೈನ್ ಪೊಲೀಸ್ ಠಾಣೆಗೆ ಮುಂದೆ ಹಾಜರಾಗಬೇಕೆಂದು ಸೂಚಿಸಿದ್ದಾರೆ. ಅಲ್ಲದೇ, ನ್ಯೂಸ್ ಚಾನೆಲ್ನ ನಿರ್ಮಾಪಕರಿಗೆ ನೋಟಿಸ್ ನೀಡಲಾಗಿದ್ದು, ಚಾನೆಲ್ನ ಕಚೇರಿಯ ಹೊರಗಡೆಯೂ ನೋಟಿಸ್ ಅಂಟಿಸಲಾಗಿದೆ.
ಇತ್ತ, ಇದೇ ತಿರುಚಿದ ವಿಡಿಯೋ ಪ್ರಕರಣದ ಸಂಬಂಧ ದಾಖಲಾಗಿರುವ ಹಲವು ಎಫ್ಐಆರ್ಗಳನ್ನು ಪ್ರಶ್ನಿಸಿ ರೋಹಿತ್ ರಂಜನ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲದೇ, ತ್ವರಿತವಾಗಿ ವಿಚಾರಣೆ ನಡೆಸಬೇಕೆಂದೂ ಅವರು ಕೋರಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ತಾಯಿ ಅಪ್ರಾಪ್ತ ಮಗುವಿನ ಆಸ್ತಿಯ ಪಾಲಕರಾಗಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್