ಮಾದೇಪುರ(ಬಿಹಾರ): ಕೊರೊನಾ ವೈರಸ್ ಹಾಗೂ ಲಾಕ್ಡೌನ್ ವೇಳೆ, ಪ್ರಧಾನಿ ಮೋದಿ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ತೊಂದರೆಗೆ ಒಳಗಾದ ಜನರಿಗೆ ಯಾವುದೇ ರೀತಿಯ ಸಹಾಯ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಹಾರಿ ಗಂಜ್ನ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಷ್ಟದ ವೇಳೆ ಸಹಾಯಕ್ಕೆ ಧಾವಿಸದ ಅವರು ಇಂದು ಮತ ಕೇಳಲು ಬಂದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಕ್ಷೇತ್ರದಿಂದ ಶರದ್ ಯಾದವ್ ಅವರ ಪುತ್ರಿ ಶುಭಾಷಿಣಿ ಯಾದವ್ ಅವರ ಬಿಹಾರಿಗಂಜ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅವರ ಪರವಾಗಿ ರಾಹುಲ್ ಪ್ರಚಾರ ನಡೆಸಿದ್ದಾರೆ.
ಪ್ರಚಾರದ ವೇಳೆ ಎನ್ಡಿಎ ನಾಯಕರು ಉದ್ಯೋಗ ಸೃಷ್ಟಿ ವಿಚಾರದಲ್ಲಿ ಮಾಡಿದ ಮೋಸದ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಎನ್ಡಿಎ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿತೀಶ್ ಕುಮಾರ್ ಬಿಹಾರ ಯುವಕರಿಗೆ ಉದ್ಯೋಗ ನೀಡುವುದಾಗಿ ಹಾಗೂ ಬಿಹಾರವನ್ನು ಬದಲಾಯಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಭರವಸೆಯನ್ನು ಉಳಿಸಿಕೊಳ್ಳಲು ನಿತೀಶ್ ಅವರಿಂದ ಸಾಧ್ಯವಾಗಿಲ್ಲ ಎಂದು ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಸಾರ್ವಜನಿಕ ಸಭೆಗಳಲ್ಲಿ ಜನರು ಉದ್ಯೋಗದ ಬಗ್ಗೆ ಪ್ರಶ್ನಿಸಿದಾಗ, ಅವರನ್ನು ಬೆದರಿಸುವ ಕೆಲಸವನ್ನು ನಿತೀಶ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್ ಸರ್ಕಾರದ ಹೊಸ ಕಾಯ್ದೆಗಳಿಂದಾಗಿ ರೈತರು ಬೆಳೆಯುವ ಭತ್ತ ಹಾಗೂ ಮೆಕ್ಕೆ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ದೊರೆಯವುದಿಲ್ಲ ಎಂದು ಕೃಷಿ ಕಾಯ್ದೆಗಳ ವಿರುದ್ಧ ಗುಡುಗಿದರು.