ನಾಸಿಕ್ (ಮಹಾರಾಷ್ಟ್ರ): ಅವರೆಲ್ಲರೂ ಜೊತೆಯಾಗಿ ವಿದ್ಯಾಭ್ಯಾಸ ಮಾಡುತ್ತಿದ್ದ ಗೆಳೆಯರು. ಆದರೆ ಆ ಸ್ನೇಹಿತರೆಲ್ಲರೂ ಸೇರಿ ಅದೇ ಗುಂಪಿನ ಒಬ್ಬ ಹುಡುಗನ ಸಾವಿಗೆ ಮುಹೂರ್ತ ಫಿಕ್ಸ್ ಮಾಡಿದ್ದರು. ಈ ಘಟನೆ ನಡೆದು ಈಗಾಗಲೇ 2 ವರ್ಷ ಕಳೆದಿದ್ದು, ಪ್ರಕರಣದ ಸತ್ಯಾಂಶ ಈಗ ಹೊರಬಂದಿದೆ.
ಇಲ್ಲಿನ ಸತ್ಪುರ್ ಸಮೀಪದ ಸಂದೀಪ್ ಫೌಂಡೇಶನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕರು ತಮ್ಮದೇ ಸ್ನೇಹಿತನನ್ನು ರ‍್ಯಾಗಿಂಗ್ ಮಾಡಿ, ಆತನನ್ನು ಸಾವಿನ ಕೂಪಕ್ಕೆ ತಳ್ಳಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಹಿನ್ನೆಲೆಯಲ್ಲಿ 8 ಇಂಜಿನಿಯರಿಂಗ್ ವಿದ್ಯಾರ್ಥಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಅಂಕಿತ್ ದಿನಕರ್ ಮಹಂಕರ್ ಮೃತ ಯುವಕ. ಈತನ ಮೃತದೇಹವು ಮಾರ್ಚ್ 15, 2019ರಲ್ಲಿ ಅಕೋಲಾ ಜಿಲ್ಲೆಯ ವಿಠ್ಠಲ ನಗರದಲ್ಲಿರುವ ಮನೆಯಲ್ಲಿ ಪತ್ತೆಯಾಗಿತ್ತು. ಮಗನ ಅಕಾಲಿಕ ನಿಧನದಿಂದ ಕಂಗಾಲಾಗಿದ್ದ ತಾಯಿ, ಇದು ಸಹಜ ಸಾವಲ್ಲ ಎಂದು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು, ತನಿಖೆ ನಡೆಸಿದ್ದಾರೆ. ಇದೀಗ 2 ವರ್ಷಗಳ ನಂತರ ಪ್ರಕರಣಕ್ಕೆ ತಿರುವು ಸಿಕ್ಕಿದೆ.
ಅಂಕಿತ್ನ ತಾಯಿ, ಸಹಪಾಠಿಗಳಾದ ರಿಚಾ ಮಹೇಂದ್ರ ಭಾರತಿ, ನಮಿತ್ ರಾಧರ್ಮನ್ ಮಿಶ್ರಾ, ಸಂಚಿತ್ ಸರ್ನಿ, ದೀಪಕುಮಾರ್ ಗೋಪಾಲ್, ರಿಷಭರಾಜ್ ವೀರೇಂದ್ರಕುಮಾರ್ ಸಿನ್ಹಾ, ಲಕ್ಷ್ ಲಲಿತ್ ಜಸ್ವಾಲ್, ಮೋನಿಕಾ ಸುರೇಶ್ ವಾಲ್ವಿ, ರಿಷಿಕೇಶ್ ವಿಶ್ವನಾಥ್ ದಾರಾಡೆ ಮತ್ತು ಅಂಕಿತ್ ಎಂಬವರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಸತ್ಯಾಂಶ ಹೊರಬಂದಿದೆ.
"ಅಂಕಿತ್ನನ್ನು ವ್ಯಸನಿಯಾಗುವಂತೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದೆವು. ಈ ಬಳಿಕ ಅಂಕಿತ್ ತನ್ನ ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ" ಎಂದು ತನಿಖೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದ ಮೇಲೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಯನ್ನು ಸಬ್ ಇನ್ಸ್‌ಪೆಕ್ಟರ್ ತುಳಶಿರಾಮ್ ರಾಥೋರ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ.