ನವದೆಹಲಿ: ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ವಿವಾದವನ್ನು ಗಮನದಲ್ಲಿಟ್ಟುಕೊಂಡು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಪ್ರತಿಕ್ರಿಯೆ ನೀಡಿದ್ದು, ಹಿಜಾಬ್ಗೆ ಸಂಬಂಧಿಸಿದಂತೆ ಯಾವುದೇ ವಿವಾದಗಳು ಇರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕುರಾನ್ ಷರೀಫ್ ಅನ್ನು ಓದಿ ಸರಿಯಾಗಿ ಅರ್ಥೈಸಿಕೊಂಡರೆ, ಕುರಾನ್ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ಗೊತ್ತಾಗುತ್ತದೆ. ಹಿಜಾಬ್ಗೆ ಅದು ಪ್ರಾಧಾನ್ಯತೆ ನೀಡುವುದಿಲ್ಲ. ಆದರೆ, ಪ್ರಸ್ತುತ ಹಿಜಾಬ್ ಮುಖ್ಯವೋ ಅಥವಾ ಶಿಕ್ಷಣ ಮುಖ್ಯವೋ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಅವರು ಹೇಳಿದರು.
ಈ ಮಧ್ಯೆ ಹಿಜಾಬ್ ವಿವಾದದ ಕುರಿತಂತೆ ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಫೆಬ್ರವರಿ 10ರಂದು ಮಧ್ಯಂತರ ತೀರ್ಪು ನೀಡಿ, ಅಂತಿಮ ತೀರ್ಪು ನೀಡುವವರೆಗೆ ಶಾಲೆಯಲ್ಲಿ ಹಿಜಾಬ್, ಕೇಸರಿ ಶಾಲು ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ:'ನಮಗೆ ಹಿಜಾಬ್ ಮುಖ್ಯ': ವಿಜಯಪುರದಲ್ಲಿ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು
ಸೋಮವಾರವೇ ಶಾಲೆಗಳು ಆರಂಭವಾಗಿದ್ದು, ಪದವಿ ಪೂರ್ವ ಕಾಲೇಜುಗಳು ಮತ್ತು ಪದವಿ ಕಾಲೇಜುಗಳು ಬುಧವಾರ ಪುನರಾರಂಭಗೊಂಡಿವೆ. ಕರ್ನಾಟಕದ ಅಲ್ಲಲ್ಲಿ ಹಿಜಾಬ್ ಧರಿಸದೇ ಕಾಲೇಜಿಗೆ ತೆರಳುವುದಿಲ್ಲ ಎಂದು ಕೆಲವು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಇನ್ನೂ ಕೆಲವೆಡೆ ಹಿಜಾಬ್ ಪ್ರತಿಭಟನೆ ನಡೆಸಿದ್ದಾರೆ.