ಚಂಡೀಗಢ : ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ ಸಾಕಷ್ಟು ಕ್ರಿಯಾಶೀಲವಾಗಿದೆ. ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಶಾಸಕಾಂಗ ಪಕ್ಷದ ಸಭೆಯ ನಂತರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ಪಂಜಾಬ್ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಭಗವಂತ್ ಮಾನ್, ಮಾಜಿ ಸಚಿವರು, ಶಾಸಕರು ಸೇರಿದಂತೆ 184 ಮಂದಿಯ ಭದ್ರತೆಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮೂಲಗಳ ಪ್ರಕಾರ ಮಾಜಿ ಸಚಿವರು, ಶಾಸಕರು ಮತ್ತು ಸಂಸದರ ಭದ್ರತೆಯನ್ನು ಕಡಿತಗೊಳಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ. ಅವರಲ್ಲಿ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಕುಟುಂಬ ಸೇರಿದಂತೆ 184 ಜನರು ಸೇರಿದ್ದಾರೆ ಎಂದು ಹೇಳಲಾಗಿದೆ.
ಈ ನಾಯಕರ ಕುಟುಂಬಗಳ ಭದ್ರತೆಗೆ ಕತ್ತರಿ : ಪಂಜಾಬ್ ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಕುಟುಂಬದ ಭದ್ರತೆಯನ್ನು ಹಿಂಪಡೆಯಲಾಗಿದೆ. ಇವರಲ್ಲದೆ ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖ್ ಜಿಂದರ್ ಸಿಂಗ್ ರಾಂಧವಾ ಅವರ ಪುತ್ರನ ಭದ್ರತೆಯನ್ನೂ ಹಿಂಪಡೆಯಲಾಗಿದೆ.
ಸುಖಜಿಂದರ್ ಸಿಂಗ್ ರಾಂಧವಾ ಅವರ ಪುತ್ರ ಅತಿ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಹೊಂದಿದ್ದರು. ಪಂಜಾಬ್‌ನ ಮಾಜಿ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಅವರ ಪುತ್ರ ಅರ್ಜುನ್ ಬಾದಲ್, ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಪುತ್ರ ರಣಿಂದರ್ ಸಿಂಗ್ ಮತ್ತು ಮಾಜಿ ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಅವರ ಪುತ್ರ ಸಿತಾಂತ್ ಚಟ್ಟೋಪಾಧ್ಯಾಯ ಅವರ ಭದ್ರತೆಯನ್ನು ಸಹ ಹಿಂಪಡೆಯಲಾಗಿದೆ.
ಎರಡನೇ ಬಾರಿ ಭದ್ರತೆ ಕಡಿತ : ಎಎಪಿ ಸರ್ಕಾರ ಮಾಜಿ ಸಚಿವರು ಮತ್ತು ಶಾಸಕರ ಭದ್ರತೆಯನ್ನು ಹಿಂಪಡೆದಿರುವುದು ಇದು ಎರಡನೇ ಬಾರಿ. ಪಕ್ಷವು ಅಧಿಕಾರಕ್ಕೆ ಬಂದ ಕೇವಲ ಒಂದು ದಿನದ ನಂತರ ಮಾರ್ಚ್ 11ರಂದು ಪಂಜಾಬ್ ಪೊಲೀಸರು 122 ಮಾಜಿ ಸಚಿವರು ಮತ್ತು ಶಾಸಕರ ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿದ್ದರು. ಭರತ್ ಭೂಷಣ್ ಆಶು, ಮನ್‌ಪ್ರೀತ್ ಸಿಂಗ್ ಬಾದಲ್, ರಾಜ್‌ಕುಮಾರ್ ವೆರ್ಕಾ, ಬ್ರಹ್ಮ್ ಮೊಹಿಂದ್ರಾ ಮತ್ತು ಸಂಗತ್ ಸಿಂಗ್ ಗಿಲ್ಜಿಯಾನ್ ಅವರು ತಮ್ಮ ಭದ್ರತೆ ಕಳೆದುಕೊಂಡ ಮಾಜಿ ಮಂತ್ರಿಗಳು.
ಇದನ್ನೂ ಓದಿ: ಪಂಜಾಬ್‌ನ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್.. ಕೊಟ್ಟ ಮಾತು ಉಳಿಸಿಕೊಂಡ ಸಿಎಂ