ಚಂಡೀಗಢ (ಪಂಜಾಬ್): ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪಂಜಾಬ್ನ ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರ ಪುತ್ರ ಕಾರ್ತಿಕ್ ಪೊಪ್ಲಿ (28) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಶನಿವಾರ ಮಧ್ಯಾಹ್ನ ಈ ಆಘಾತಕಾರಿ ಬೆಳವಣಿಗೆ ನಡೆದಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 7 ಕೋಟಿ ರೂ.ಗಳ ಒಳಚರಂಡಿ ಯೋಜನೆಯ ಗುತ್ತಿಗೆದಾರರಿಂದ ಶೇ.1ರಷ್ಟು ಕಮಿಷನ್ ಪಡೆದ ಆರೋಪದ ಮೇಲೆ ಸೋಮವಾರ ತಡರಾತ್ರಿ ಸಂಜಯ್ ಪೋಪ್ಲಿ ಅವರನ್ನು ಬಂಧಿಸಲಾಗಿತ್ತು. ಹೆಚ್ಚಿನ ತನಿಖೆಗಾಗಿ ಶನಿವಾರ ವಿಜಿಲೆನ್ಸ್ ಬ್ಯೂರೋ ಅಧಿಕಾರಿಗಳ ತಂಡ ಸಂಜಯ್ ಪೋಪ್ಲಿ ಮನೆಗೆ ತೆರಳಿತ್ತು. ಈ ವೇಳೆ ಮನೆಯಲ್ಲಿ ಗುಂಡಿನ ಸದ್ದು ಕೇಳಿಸಿತು ಎಂದು ಪೊಲೀಸ್ ಅಧಿಕಾರಿ ಕುಲ್ದೀಪ್ ಚಹಾಲ್ ತಿಳಿಸಿದ್ದಾರೆ.
ಈ ಗುಂಡಿನ ಸದ್ದು ಕೇಳಿ ಮನೆಯಲ್ಲಿ ಪರಿಶೀಲನೆಯ ನಂತರ ಸಂಜಯ್ ಪೊಪ್ಲಿ ಮಗ ತನ್ನ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿರುವುದು ಗೊತ್ತಾಯಿತು. ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ವಿಚಾರಣೆಗೆಂದು ಸಂಜಯ್ ಪೋಪ್ಲಿ ಅವರನ್ನೂ ಅಧಿಕಾರಿಗಳು ಮನೆಗೆ ಕರೆದುಕೊಂಡು ಬಂದಿದ್ದರು.
ಅಧಿಕಾರಿಗಳ ವಿರುದ್ಧವೇ ಕೊಲೆ ಆರೋಪ: ಕಾರ್ತಿಕ್ ಪೊಪ್ಲಿ ಮನೆಯಲ್ಲಿ ಗುಂಡು ಹಾರಿಸಿಕೊಂಡಾಗ ಆತನ ತಾಯಿ ಮತ್ತು ಇತರರು ಕೂಡ ಇದ್ದರು. ಈ ಕೊಲೆಯನ್ನು ಅಧಿಕಾರಿಗಳೇ ಮಾಡಿದ್ದಾರೆ ಎಂದು ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ, ಮಗನ ಸಾವಿಗೆ ನ್ಯಾಯ ಸಿಗುವವರೆಗೆ ತನ್ನ ಕೈಯಲ್ಲಿರುವ ರಕ್ತದ ಕಲೆಗಳನ್ನು ತೊಳೆಯುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ಮನೆಗೆ ಬಂದ ಅಧಿಕಾರಿಗಳು ನನ್ನ ಮಗನಿಗೆ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ನಂತರ ಸಾಕ್ಷ್ಯ ನಾಶಕ್ಕಾಗಿ ನಮ್ಮ ಮನೆಯ ಸಹಾಯಕಿಗೂ ಹಿಂಸೆ ಕೊಟ್ಟಿದ್ದಾರೆ. ಇಡೀ ವಿಜಿಲೆನ್ಸ್ ಬ್ಯೂರೋ ಮತ್ತು ಡಿಎಸ್ಪಿ ಮುಖ್ಯಮಂತ್ರಿಗಳ ಒತ್ತಡಕ್ಕೆ ಒಳಗಾಗಿ ಈ ರೀತಿ ಮಾಡಿದ್ದಾರೆ ಎಂದು ಆಕ್ರೋಶದಿಂದ ನುಡಿದಿದ್ದಾರೆ. ಸಂಜಯ್ ಪೊಪ್ಲಿ ಸಂಬಂಧಿ ಅನುಪ್ರೀತ್ ಕುಲಾರ್ ಕೂಡ, ವಿಜಿಲೆನ್ಸ್ ಅಧಿಕಾರಿಗಳು ಕಾರ್ತಿಕ್ ಪೊಪ್ಲಿ ಮನೆಯ ಮೆಟ್ಟಿಲುಗಳ ಮೇಲೆ ಕರೆದೊಯ್ದರು. ಆಗ ನಾವು ಕೆಳಡಗೆಯೇ ನಿಂತಿದ್ದೆವು. ಇದಾದ ಸ್ವಲ್ಪ ಸಮಯದಲ್ಲೇ ನಮಗೆ ಗುಂಡಿನ ಶಬ್ದ ಕೇಳಿಸಿತು. ವಿಜಿಲೆನ್ಸ್ ಅಧಿಕಾರಿಗಳೇ ಕಾರ್ತಿಕ್ ಪೊಪ್ಲಿಯನ್ನು ಕೊಲೆ ಮಾಡಿದ್ದಾರೆ ಎಂದೂ ದೂರಿದ್ದಾರೆ.
12 ಕೆಜಿ ಚಿನ್ನ ಪತ್ತೆ: ಅಧಿಕಾರಿಗಳು ಮನೆಯ ಪರಿಶೀಲನೆ ವೇಳೆ ಸುಮಾರು 12.5 ಕೆಜಿ ಚಿನ್ನ ಪತ್ತೆಯಾಗಿದೆ. ಇದರಲ್ಲಿ ತಲಾ ಒಂದು ಕೆಜಿಯ ಮೂರು ಚಿನ್ನದ ಬಿಸ್ಕೆಟ್ಗಳು ಸಹ ಸೇರಿವೆ. ಅಲ್ಲದೇ, ಮೂರು ಕೆಜಿ ಬೆಳ್ಳಿ ಹಾಗೂ ನಾಲ್ಕು ಐಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಇಂದಿಗೆ ಕಸ್ಟಡಿ ಅವಧಿ ಮುಗಿದಿತ್ತು: ಭ್ರಷ್ಟಾಚಾರದ ಆರೋಪದಡಿ ಸೋಮವಾರ ರಾತ್ರಿ ಸಂಜಯ್ ಪೊಪ್ಲಿ ಮತ್ತು ಇನ್ನೊಬ್ಬರನ್ನು ಬಂಧಿಸಲಾಗಿತ್ತು. ನಂತರ ವಿಜಿಲೆನ್ಸ್ ಬ್ಯೂರೋ ಸಂಜಯ್ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು. ಇಂದು ಅವರ ಕಸ್ಟಡಿ ಅವಧಿ ಮುಗಿಯುತ್ತಿದ್ದಂತೆ ವಿಜಿಲೆನ್ಸ್ ತಂಡ ಮತ್ತೊಮ್ಮೆ ವಿಚಾರಣೆಗಾಗಿ ಮನೆಗೆ ಆಗಮಿಸಿತ್ತು.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಹೆಂಡತಿ ಜತೆ ಶಾಪಿಂಗ್ ಮಾಡುತ್ತಿರುವಾಗಲೇ ಎಎಎಸ್ ಅಧಿಕಾರಿ ಬಂಧನ