ಚಂಡೀಗಢ (ಪಂಜಾಬ್): ಸರ್ಕಾರಿ ನೌಕರರಿಗೆ ಪಂಜಾಬ್ ಸರ್ಕಾರ ಖುಷಿ ಸುದ್ದಿ ನೀಡಿದೆ. ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಲು ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಿಂದ 1.75 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ನೇರವಾಗಿ ಪ್ರಯೋಜನವಾಗಲಿದೆ.
ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಳೆ ಪಿಂಚಣಿ ಯೋಜನೆಜಾರಿಗೊಳಿಸುವ ಅಧಿಸೂಚನೆ ಹೊರಡಿಸಲು ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಈ ಮೂಲಕ ಪ್ರಸ್ತುತ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ವ್ಯಾಪ್ತಿಗೆ ಒಳಪಡುವ ನೌಕರರು ಒಪಿಎಸ್ ಪ್ರಯೋಜನ ಪಡೆಯಲಿದೆ ಎಂದು ಮುಖ್ಯಮಂತ್ರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಇದು ಪ್ರಸ್ತುತ ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುವ 1.75 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ನೇರ ಪ್ರಯೋಜನ ನೀಡುತ್ತದೆ. ಇದರ ಜೊತೆಗೆ 1.26 ಲಕ್ಷ ಉದ್ಯೋಗಿಗಳು ಈಗಾಗಲೇ ಒಪಿಎಸ್ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಈ ಯೋಜನೆ ಸರ್ಕಾರಿ ನೌಕರರ ಭವಿಷ್ಯವನ್ನು ಕಾಪಾಡುತ್ತದೆ ಮತ್ತು ರಾಜ್ಯಕ್ಕೆ ನೌಕರರ ಕೊಡುಗೆಯನ್ನು ಗುರುತಿಸುವುದಾಗಿದೆ ಎಂದು ಹೇಳಿದ್ದಾರೆ.
ಗುಜರಾತ್ ಚುನಾವಣೆ ಮೇಲೆ ಆಪ್ ಕಣ್ಣು: ದೆಹಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ ಈಗ ಗುಜರಾತ್ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿದಿದೆ. ಕಳೆದ 40 ದಿನಗಳಿಂದ ಆಪ್ನ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿರಂತರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ಈ ಮೂಲಕ ಗುಜರಾತ್ ಚುನಾವಣೆಯ ಮೇಲೆ ಆಮ್ ಆದ್ಮಿ ಪಕ್ಷ ಕಣ್ಣಿಟ್ಟಿದೆ. ಇದರ ಭಾಗವಾಗಿಯೇ ಭಗವಂತ್ ಮಾನ್ ನೇತೃತ್ವದ ಆಪ್ ಸರ್ಕಾರ ಶುಕ್ರವಾರ ಪಂಜಾಬ್‌ನಲ್ಲಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್)ಯನ್ನು ಜಾರಿಗೊಳಿಸುವ ಅಧಿಸೂಚನೆಗೆ ಅನುಮೋದಿಸಿದೆ ಎಂದು ವಿಶ್ಲೇಷಿಸಲಾಗಿದೆ. ಈ ಹಿಂದೆ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ಕೂಡ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವ ಮೂಲಕ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿದವು.
ಏನಿದು ಒಪಿಎಸ್-ಎನ್‌ಪಿಎಸ್?: ಹಳೆ ಪಿಂಚಣಿ ಯೋಜನೆ (ಒಪಿಎಸ್)ಅಡಿ ಸರ್ಕಾರಿ ನೌಕರರು ನಿವೃತ್ತಿಯ ನಂತರ ಮಾಸಿಕ ಪಿಂಚಣಿಗೆ ಅರ್ಹನಾಗಿರುತ್ತಾರೆ. ಮಾಸಿಕ ಪಿಂಚಣಿಯು ಸಾಮಾನ್ಯವಾಗಿ ನೌಕರರ ಕೊನೆಯ ಸಂಬಳದ ಅರ್ಧದಷ್ಟು ಸಿಗುತ್ತದೆ.
ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್)ಅಡಿ ನೌಕರರು ತಮ್ಮ ಸಂಬಳದ ಒಂದು ಭಾಗವನ್ನು ಪಿಂಚಣಿ ನಿಧಿಗೆ ಕೊಡುಗೆ ನೀಡುತ್ತಾರೆ. ಅದರ ಆಧಾರದ ಮೇಲೆ ಅವರು ನಿವೃತ್ತಿಯ ಮೇಲೆ ಒಂದೇ ಬಾರಿಗೆ ಒಟ್ಟು ಮೊತ್ತಕ್ಕೆ ಪಡೆಯಲು ಅರ್ಹರಾಗಿರುತ್ತಾರೆ. ಈ ಇಲ್ಲಿ ಮಾಸಿಕ ಪಿಂಚಣಿ ಇರಲಿಲ್ಲ.
ದೇಶದಲ್ಲಿ 2003ರ ಡಿಸೆಂಬರ್ನಲ್ಲಿ ಹಳೆ ಪಿಂಚಣಿ ಯೋಜನೆಯನ್ನು ನಿಲ್ಲಿಸಲಾಗಿತ್ತು. 2004ರ ಏಪ್ರಿಲ್ 1ರಂದು ಹೊಸ ಪಿಂಚಣಿ ಯೋಜನೆ ಜಾರಿಗೆ ತರಲಾಗಿತ್ತು.
ಇದನ್ನೂ ಓದಿ: ಸರ್ಕಾರಿ ಕಾರಿನ ಮುಂದೆ ನಿಂತು ಪೋಸ್ ಕೊಟ್ಟ IAS ಅಧಿಕಾರಿ! ಚುನಾವಣಾ ಕರ್ತವ್ಯದಿಂದಲೇ ಬಿಡುಗಡೆ