ನವದೆಹಲಿ: 2024 ರ ಗಣರಾಜ್ಯೋತ್ಸವದಲ್ಲಿ ಪ್ರದರ್ಶಿಸಲು ಉದ್ದೇಶಿಸಿದ್ದ ಪಂಜಾಬ್ ಮತ್ತು ಪಶ್ಚಿಮಬಂಗಾಳದ ಟ್ಯಾಬ್ಲೋಗಳು ನಿಗದಿತ ಥೀಮ್ನಲ್ಲಿ ರೂಪಿಸಲಾಗದ ಕಾರಣ, ಅವುಗಳನ್ನು ಆಯ್ಕೆಗೆ ಪರಿಗಣಿಸಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಗಣರಾಜ್ಯೋತ್ಸವ ವೇಳೆ ಪರೇಡ್ ಮಾಡಲಾಗುವ ರಾಜ್ಯಗಳ ಟ್ಯಾಬ್ಲೋ ಆಯ್ಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಪಂಜಾಬ್ ಮತ್ತು ಪಶ್ಚಿಮಬಂಗಾಳದ ಆರೋಪ ಮಾಡಿದ್ದವು. ಈ ಕುರಿತು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದು, ಟ್ಯಾಬ್ಲೋ ಆಯ್ಕೆಗೆ ಮೂರು ಸಭೆಗಳನ್ನು ನಡೆಸಲಾಗಿದೆ. ಮೊದಲ ಮೂರು ಸುತ್ತಿನ ಸಭೆಗಳಲ್ಲಿ ಪಂಜಾಬ್‌ನ ಟ್ಯಾಬ್ಲೋವನ್ನು ಪರಿಗಣಿಸಲಾಗಿತ್ತು. ಬಳಿಕದ ಆಯ್ಕೆ ಸಮಿತಿಯು ನಿಗದಿತ ಥೀಮ್ನಲ್ಲಿ ಪಂಜಾಬ್ ಸ್ತಬ್ಧಚಿತ್ರ ಹೊಂದಿಕೆಯಾಗದ ಕಾರಣ ಅದನ್ನು ಕೈಬಿಡಲಾಯಿತು. ಜೊತೆಗೆ ಪಶ್ಚಿಮಬಂಗಾಳದ ಟ್ಯಾಬ್ಲೋವನ್ನೂ ಕೂಡ ಪರಿಗಣಿಸಲಾಗಿಲ್ಲ ಎಂದು ತಿಳಿಸಿದರು.
ಗಣರಾಜ್ಯೋತ್ಸವ ಪರೇಡ್ನಲ್ಲಿ ಪಂಜಾಬ್, ಪಶ್ಚಿಮ ಬಂಗಾಳ ಸೇರಿದಂತೆ 30 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ತಮ್ಮ ಸ್ತಬ್ಧಚಿತ್ರ ಪ್ರದರ್ಶಿಸಲು ಆಸಕ್ತಿ ವಹಿಸಿವೆ. ಇದರಲ್ಲಿ ಅಂತಿಮವಾಗಿ 15-16 ಟ್ಯಾಬ್ಲೋಗಳು ಅಂತಿಮವಾಗಿ ಆಯ್ಕೆಯಾಗುತ್ತವೆ. ಪಂಜಾಬ್‌ನ ಟ್ಯಾಬ್ಲೋವನ್ನು ಗಣರಾಜ್ಯೋತ್ಸವ ಪರೇಡ್‌ಗೆ 2017 ರಿಂದ 2022 ರ 8 ವರ್ಷಗಳಲ್ಲಿ 6 ಬಾರಿ ಆಯ್ಕೆಯಾಗಿದೆ. ಪಶ್ಚಿಮ ಬಂಗಾಳದ ಸ್ತಬ್ಧಚಿತ್ರ 8 ವರ್ಷದಲ್ಲಿ 5 ಬಾರಿ ಆಯ್ಕೆ ಸಮಿತಿಯ ಗಮನ ಸೆಳೆದಿತ್ತು.
ಟ್ಯಾಬ್ಲೋ ರಚನೆಯ ಮಾನದಂಡವೇನು?: ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸಚಿವಾಲಯಗಳು, ಇಲಾಖೆಗಳಿಂದ ಸ್ವೀಕರಿಸಲಾದ ಟ್ಯಾಬ್ಲೋಗಳು ಆಯಾ ರಾಜ್ಯಗಳ ಕಲೆ, ಸಂಸ್ಕೃತಿ, ಶಿಲ್ಪಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ ಸಂಯೋಜನೆ, ಚಿತ್ರಕಲೆ ಸೇರಿದಂತೆ ಗಣ್ಯ ವ್ಯಕ್ತಿಗಳನ್ನು ಒಳಗೊಂಡಿರಬೇಕು. ಅದರ ಮೊದಲ ಡೆಮೋವನ್ನು ರಕ್ಷಣಾ ಸಚಿವಾಲಯದ ಸುಪರ್ದಿಯಲ್ಲಿರುವ ಟ್ಯಾಬ್ಲೋ ಆಯ್ಕೆ ಸಮಿತಿಗೆ ನೀಡಬೇಕು. ಬಳಿಕ ಅವರು ಮಾನದಂಡಗಳ ಆಧಾರದ ಮೇಲೆ ಆಯ್ಕೆಗೆ ಪರಿಗಣಿಸುತ್ತಾರೆ. ಬದಲಾವಣೆ ಇದ್ದಲ್ಲಿ ಸೂಚಿಸಲಾಗುತ್ತೆ. ಬಳಿಕ ಅಂತಿಮವಾಗಿ ಆಯ್ಕೆಗೆ ಪರಿಗಣಿತವಾಗುತ್ತದೆ. ಪ್ರಮುಖವಾಗಿ ತಜ್ಞರ ಸಮಿತಿಯು ಯಾವುದೇ ರಾಜ್ಯದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡುವ ಮೊದಲು ಥೀಮ್, ಪರಿಕಲ್ಪನೆ, ವಿನ್ಯಾಸ ಮತ್ತು ದೃಶ್ಯದ ಆಧಾರದ ಮೇಲೆ ಪರಿಗಣಿಸುತ್ತದೆ.
ಪಂಜಾಬ್ ಆರೋಪವೇನು?: ಪಂಜಾಬ್ನಿಂದ ರೂಪಿಸಲಾದ ಟ್ಯಾಬ್ಲೋವನ್ನು ಪರಿಗಣಿಸದ ಕಾರಣ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದ್ದರು. ಗಣರಾಜ್ಯೋತ್ಸವದ ಪರೇಡ್‌ಗೆ ರಾಜ್ಯದ ಟ್ಯಾಬ್ಲೋ ಸೇರಿಸದಿರುವುದು ಸರ್ಕಾರದ ತಾರತಮ್ಯ ಧೋರಣೆ ತೋರಿಸುತ್ತದೆ ಎಂದು ಆಪಾದಿಸಿದ್ದರು. ಕಳೆದ ವರ್ಷವೂ ರಾಜ್ಯದ ಸ್ತಬ್ಧಚಿತ್ರವನ್ನು ಕೈಬಿಡಲಾಗಿತ್ತು. ಈಗಲೂ ಅದನ್ನೇ ಮಾಡಲಾಗಿದೆ. ಇದು ಕೇಂದ್ರದ ನಿರ್ಧಾರವು ಪಂಜಾಬ್ ಜನರ ವಿರುದ್ಧವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಸಿಎಂ ಮಾನ್ ಆರೋಪಿಸಿದ್ದರು.
ಇದನ್ನೂ ಓದಿ: ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ