ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಆಂಬ್ಯುಲೆನ್ಸ್ ಮತ್ತು ಶವ ಸಾಗಿಸುವ ವಾಹನ ಚಾಲಕರ ಅಲಭ್ಯತೆಯ ಕಾರಣ ಕುಟುಂಬವೊಂದು 95 ವರ್ಷದ ವೃದ್ಧೆಯ ಮೃತದೇಹವನ್ನು ಆಟೋ ರಿಕ್ಷಾದಲ್ಲಿಯೇ ಶವಾಗಾರಕ್ಕೆ ತೆಗೆದುಕೊಂಡು ಹೋಗಿದೆ. ಸೋಮವಾರ ರಾತ್ರಿ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪುಣೆಯ ನವ ಮೋದಿಖಾನಾ ಕ್ಯಾಂಪ್ ಪ್ರದೇಶದಲ್ಲಿ ರಾತ್ರಿ ಅಜ್ಜಿ ತಮ್ಮ ಮನೆಯಲ್ಲಿ ನಿಧನರಾಗಿದ್ದರು. ಮೃತದೇಹವನ್ನು ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಶವಾಗಾರಕ್ಕೆ ಸಾಗಿಸಲು ಶವ ವಾಹನವನ್ನು ಪಡೆಯಲು ಪ್ರಯತ್ನಿಸಿದ್ದರು. ಆದರೆ, ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಶವ ವಾಹನ ಚಾಲಕರು ಅಥವಾ ಆಂಬ್ಯುಲೆನ್ಸ್ ಚಾಲಕರು ಲಭ್ಯ ಇರಲಿಲ್ಲ. ಸಾಕಷ್ಟು ಪ್ರಯತ್ನದ ಹೊರತಾಗಿಯೂ ಕುಟುಂಬ ಸದಸ್ಯರಿಗೆ ಶವ ವಾಹನದ ಮುಖ್ಯಸ್ಥರಾಗಲಿ ಅಥವಾ ಅವರ ಸಹಾಯಕರನ್ನಾಗಲಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ಸಂಬಂಧಿಕರೇ ಮೃತದೇಹವನ್ನು ಆಟೋ ರಿಕ್ಷಾದಲ್ಲಿ ಶವಾಗಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆ ತಲುಪಿದಾಗ ಶವಾಗಾರ ಮುಚ್ಚಿರುವುದು ಕಂಡುಬಂತು ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ವೇಳೆ ಆಸ್ಪತ್ರೆ ಅಧಿಕಾರಿಗಳನ್ನು ಸಂಪರ್ಕಿಸಿ ಕರ್ತವ್ಯದಲ್ಲಿದ್ದ ದಾದಿಯರ ಸಹಾಯ ಕೋರಿದ್ದಾರೆ. ಆದರೆ, ಅವರ್ಯಾರೂ ನೆರವಿಗೆ ಬಂದಿಲ್ಲ. ಸಹಾಯ ಕೋರಿ ವೈದ್ಯಾಧಿಕಾರಿಯೊಬ್ಬರ ನಿವಾಸಕ್ಕೂ ಕುಟುಂಬಸ್ಥರು ತೆರಳಿದ್ದರು. ಅವರ ನಿವಾಸ ಕೂಡ ಬೀಗ ಹಾಕಿತ್ತು ಎಂದು ದೂರಲಾಗಿದೆ.
ಅಂತಿಮವಾಗಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಆಸ್ಪತ್ರೆಯ ಬದಲಿಗೆ ಸಾಸೂನ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ಕೊಂಡೊಯ್ದರು ಎಂದು ತಿಳಿದು ಬಂದಿದೆ. ಮತ್ತೊಂದೆಡೆ, ಆಂಬ್ಯುಲೆನ್ಸ್ ಚಾಲಕನ ಅಲಭ್ಯತೆಯ ಬಗ್ಗೆ ಕುಟುಂಬದವರಿಂದ ನಮಗೆ ಯಾರು ಸಂಪರ್ಕಿಸಿಲ್ಲ ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಆಸ್ಪತ್ರೆಯವರು ತಿಳಿಸಿದ್ದಾರೆ. ಇದೇ ವೇಳೆ ಆಸ್ಪತ್ರೆಯಲ್ಲಿ ಮಾನವ ಸಂಪನ್ಮೂಲ ಕೊರತೆಯನ್ನು ಆಡಳಿತ ಮಂಡಳಿ ಒಪ್ಪಿಕೊಂಡಿದೆ. ಆದರೆ, ವೈದ್ಯರು ಮತ್ತು ದಾದಿಯರನ್ನು ನೆರವಿಗೆ ಬಂದಿಲ್ಲ ಎಂಬ ಕುಟುಂಬದ ಆರೋಪಗಳನ್ನು ತಳ್ಳಿಹಾಕಲಾಗಿದೆ.
ಇದನ್ನೂ ಓದಿ: ಹೆತ್ತ ತಾಯಿ ಕೊಂದು ಸೂಟ್ ಕೇಸ್ನಲ್ಲಿ ಶವ ತಂದು ಪೊಲೀಸರಿಗೆ ಶರಣಾದ ಮಗಳು
ತಮಿಳುನಾಡಿನಲ್ಲಿ ನಡೆದ ಘಟನೆ: ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲೂ ಇಂತಹದ್ದೇ ಮತ್ತೊಂದು ಪ್ರಕರಣ ವರದಿಯಾಗಿತ್ತು. ವೆಲ್ಲೂರು ಜಿಲ್ಲೆಯ ಅಲ್ಲೇರಿ ಗ್ರಾಮದಲ್ಲಿ ಮನೆಯ ಹೊರಗೆ ಮಲಗಿದ್ದ ಒಂದೂವರೆ ವರ್ಷದ ಮಗು ಹಾವು ಕಚ್ಚಿತ್ತು. ಪೋಷಕರು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲೇ ಮಗು ಮೃತಪಟ್ಟಿತ್ತು. ಹೀಗಾಗಿ ಆಸ್ಪತ್ರೆಯವರು ಮರಣೊತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಹಸ್ತಾಂತರ ಮಾಡಿದ್ದರು. ಹೀಗಾಗಿ ಅಂತ್ಯಸಂಸ್ಕಾರಕ್ಕೆಂದು ಮಗುವಿನ ಶವವನ್ನು ಆಂಬ್ಯುಲೆನ್ಸ್ನಲ್ಲಿ ಸಾಗಿಸುತ್ತಿದ್ದರು. ಮಾರ್ಗ ಮಧ್ಯದಲ್ಲೇ ವಾಹನ ಕೆಟ್ಟು ನಿಂತಿದ್ದರಿಂದ 10 ಕಿಮೀ ದೂರ ಮಗುವಿನ ಶವವನ್ನು ತಾಯಿ ಎತ್ತಿಕೊಂಡೇ ಹೋಗಿದ್ದರು.
ಇದನ್ನೂ ಓದಿ: ಹಾವು ಕಚ್ಚಿ ಮೃತಪಟ್ಟ ಮಗುವಿನ ಶವ ಹಿಡಿದುಕೊಂಡು 10 ಕಿ.ಮೀ ನಡೆದೇ ಸಾಗಿದ ತಾಯಿ!