ಹೈದರಾಬಾದ್: ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಕಿರಣ್ ಬೇಡಿ ಅವರ ಸ್ಥಾನಕ್ಕೆ ತಮಿಳ್ ಸಾಯಿ ಸೌಂದರರಾಜನ್ ಅವರನ್ನು ಗವರ್ನರ್ ಆಗಿ ನೇಮಿಸಿದ ಬೆನ್ನಲ್ಲೇ ಪುದುಚೇರಿಯಲ್ಲಿ ರಾಜಕೀಯ ಮತ್ತಷ್ಟು ಕಾವು ಪಡೆದುಕೊಂಡಿದೆ. ಗವರ್ನರ್ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ, ಮುಖ್ಯಮಂತ್ರಿ ನಾರಾಯಣ ಸ್ವಾಮಿ ವಿಧಾನ ಸಭೆಯಲ್ಲಿ ಫೆ.22 ರಂದು ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ್ದು ತಮಿಳ್ ಸಾಯಿ ಮಾಡಿದ ಮೊದಲ ಕೆಲಸವಾಗಿದೆ.
ಸದನದಲ್ಲಿ ಪಕ್ಷಗಳ ಬಲಾಬಲ
ಕಾಂಗ್ರೆಸ್ ನೇತೃತ್ವದ ಅಧಿಕಾರಾರೂಢ ಗುಂಪಿನಲ್ಲಿನ ಅಸಮಾಧಾನ ಹಾಗೂ ಭಿನ್ನಮತದ ಚಟುವಟಿಕೆಯಿಂದಾಗಿ ಕೆಲ ಶಾಸಕರು ರಾಜೀನಾಮೆ ನೀಡಿದ್ದು, ಇನ್ನು ಓರ್ವ ಶಾಸಕ ಅನರ್ಹಗೊಳಿಸಲ್ಪಟ್ಟಿದ್ದಾರೆ. ಹೀಗಾಗಿ ಸದ್ಯ ಪುದುಚೇರಿ ವಿಧಾನಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳೆರಡೂ ತಲಾ 14 ಸದಸ್ಯರ ಬಲ ಹೊಂದಿವೆ. ಆಡಳಿತಾರೂಢ ಮೈತ್ರಿಕೂಟದಲ್ಲಿ ಕಾಂಗ್ರೆಸ್ 10, ಡಿಎಂಕೆ 3 ಸದಸ್ಯರಿದ್ದು, ಓರ್ವ ಸ್ವತಂತ್ರ ಅಭ್ಯರ್ಥಿ ಕೂಡ ಮೈತ್ರಿಕೂಟಕ್ಕೆ ಬೆಂಬಲ ನೀಡಿದ್ದಾರೆ. ಇನ್ನು ಪ್ರತಿಪಕ್ಷದ ಪಾಳಯದಲ್ಲಿ ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್, ಎಐಎಡಿಎಂಕೆ 4 ಹಾಗೂ ಬಿಜೆಪಿಯ 4 ಶಾಸಕರಿದ್ದಾರೆ.
22 ರಂದು ವಿಶ್ವಾಸಮತ ಯಾಚನೆ
ಕಿರಣ್ ಬೇಡಿ ಗವರ್ನರ್ ಆಗಿದ್ದಾಗ ಮೂವರನ್ನು ವಿಧಾನ ಸಭೆಗೆ ನಾಮಕರಣ ಮಾಡಿದ್ದರು. ಈ ಮೂವರೂ ಬಿಜೆಪಿ ಬೆಂಬಲಿಗರಾಗಿದ್ದಾರೆ. ಈ ನಾಮಕರಣ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಸುಪ್ರೀಂ ಕೋರ್ಟ್ನಲ್ಲಿಯೂ ಕಾಂಗ್ರೆಸ್ಗೆ ಸೋಲಾಯಿತು. ಹೀಗಾಗಿ ಮುಖ್ಯಮಂತ್ರಿ ನಾರಾಯಣಸ್ವಾಮಿಯ ಸಂಕಷ್ಟಗಳು ಹೆಚ್ಚಾಗಿವೆ. ಸದ್ಯ ಫೆ.22 ರಂದು ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಸ್ಪೀಕರ್ ವಿಪಿ ಸಿವಕೊಳುಂದು ಅವರ ಮತವೇ ನಿರ್ಣಾಯಕವಾಗಿದೆ ಎನ್ನಲಾಗಿದೆ.
ಎರಡೂ ಬಣಗಳು ತಮಗೆ ಬಹುಮತ ಇದೆ ಎಂದು ಹೇಳಿಕೊಳ್ಳುತ್ತಿವೆ. ಆದರೆ ನಿಜವಾದ ಸತ್ವ ಪರೀಕ್ಷೆ ಫೆ.22 ರಂದು ವಿಧಾನ ಸಭೆಯ ಅಂಗಳದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ವಿಶ್ವಾಸಮತ ಗೆದ್ದು ಬೀಗಲಿದ್ದಾರಾ ಅಥವಾ ಬಿಜೆಪಿ ಕೊನೆಯ ನಗೆ ಬೀರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಕಿರಣ್ ಬೇಡಿ ಔಟ್, ತಮಿಳ್ ಸಾಯಿ ಇನ್
ಕಳೆದ ಫೆ.16 ರಂದು ಗವರ್ನರ್ ಕಿರಣ್ ಬೇಡಿ ಅವರನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದರು. ಇದರ ಬೆನ್ನಲ್ಲೇ ತಮಿಳ್ ಸಾಯಿ ಸೌಂದರರಾಜನ್ ಅವರನ್ನು ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಯಿತು. ತಮಿಳ್ ಸಾಯಿ ಇವರು ಪುದುಚೇರಿ ಗವರ್ನರ್ ಆದ ಪ್ರಥಮ ತಮಿಳು ವ್ಯಕ್ತಿಯಾಗಿದ್ದಾರೆ. "ಸಾಂವಿಧಾನಿಕವಾಗಿ ಜನರಿಂದ ಆಯ್ಕೆಯಾದ ಸರ್ಕಾರದ ಕೆಲಸದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸಂವಿಧಾನದ ಮೌಲ್ಯಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ." ಎಂದು ತಮಿಳ್ ಸಾಯಿ ಹೇಳಿದ್ದಾರೆ.
ತಾವು ಕೈಗೊಂಡ ಕೆಲ ಕಠಿಣ ಕ್ರಮಗಳಿಂದಲೇ ಅಧಿಕಾರ ಕಳೆದುಕೊಂಡರಾ ಬೇಡಿ?
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗುತ್ತಲೇ ಕಿರಣ್ ಬೇಡಿ ರಾಜ್ಯದಲ್ಲಿ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾದರು. ಉಚಿತ ಅಕ್ಕಿ ವಿತರಣೆ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಬೇಡಿ, ಸರ್ಕಾರದ ವಿರುದ್ಧ ಕ್ರಮಕ್ಕೆ ಮುಂದಾದರು. ಈ ವಿಷಯದಲ್ಲಿ ಅವರು ಕೆಲಮಟ್ಟಿಗೆ ಎಡವಟ್ಟು ಮಾಡಿಕೊಂಡರು ಎನ್ನಲಾಗುತ್ತದೆ. ಅಲ್ಲದೆ ಹೆಲ್ಮೆಟ್ ಕಡ್ಡಾಯ ಮಾಡಿದ್ದು ಹಾಗೂ ನಿಯಮ ಉಲ್ಲಂಘನೆಗೆ ಸಾವಿರ ರೂ. ದಂಡ ಕಡ್ಡಾಯಗೊಳಿಸಿದ್ದರಿಂದ ಕಿರಣ್ ಬೇಡಿ ಜನರಲ್ಲಿ ಅಪ್ರಿಯರಾಗತೊಡಗಿದರು. ಇದು ಮಾತ್ರವಲ್ಲದೆ ಇನ್ನೂ ಹಲವಾರು ವಿಷಯಗಳಲ್ಲಿ ಅವರ ಅತಿ ಉತ್ಸಾಹದ ಕ್ರಮಗಳು ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸಿದವು. ಇದೇ ಕಾರಣಕ್ಕೆ ಬಿಜೆಪಿ ಆದಷ್ಟು ಬೇಗ ಅವರನ್ನು ಎತ್ತಂಗಡಿ ಮಾಡಲು ಪ್ರಯತ್ನಿಸುತ್ತಿತ್ತು.
ಈಗ ಕೊನೆಗೂ ಕಿರಣ್ ಬೇಡಿ ರಾಜಭವನದಿಂದ ಹೊರನಡೆದಿದ್ದು, ಆ ಜಾಗಕ್ಕೆ ತಮಿಳ್ ಸಾಯಿ ಬಂದಿದ್ದಾರೆ. ರಾಜಭವನ ಪ್ರವೇಶಿಸುತ್ತಿರುವಂತೆಯೇ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸುವಂತೆ ನೂತನ ಗವರ್ನರ್ ಆದೇಶ ಮಾಡಿದ್ದಾರೆ.