ಪುದುಚೇರಿ: ಕೋವಿಡ್ ಉಲ್ಬಣಿಸಿದ ಪರಿಣಾಮ ದೇಶದ ಅನೇಕ ರಾಜ್ಯಗಳು ಈಗಾಗಲೇ ಲಾಕ್‌ಡೌನ್ ವಿಧಿಸಿದ್ದು, ಇದೀಗ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕೂಡ ಮೇ 10 ರಿಂದ ಮೇ 24ರ ವರೆಗೆ 14 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.
ಈ ಹಿಂದೆ ಏಪ್ರಿಲ್ 27ರಿಂದ ಮೇ 3 ರವರೆಗೆ ಪುದುಚೇರಿ ಸರ್ಕಾರವು ವೈರಸ್ ಹರಡುವಿಕೆ ತಡೆಗಟ್ಟಲು ಕಠಿಣ ನಿರ್ಬಂಧಗಳನ್ನು ಹೇರಿತ್ತು. ಆದರೆ ಪರಿಸ್ಥಿತಿ ಹತೋಟಿಗೆ ಬಂದಿರಲಿಲ್ಲ. ಪುದುಚೇರಿ ನೂತನ ಸಿಎಂ ಆಗಿ ಎನ್.ರಂಗಸ್ವಾಮಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಇದೀಗ ಲಾಕ್‌ಡೌನ್ ಜಾರಿಗೆ ತರಲಾಗಿದೆ.
ಇದನ್ನೂ ಓದಿ: ಪುದುಚೇರಿ ನೂತನ ಸಿಎಂ ಆಗಿ ಎನ್.ರಂಗಸ್ವಾಮಿ ಅಧಿಕಾರ ಸ್ವೀಕಾರ
ಎಲ್ಲಾ ಕಡಲತೀರಗಳು, ಉದ್ಯಾನವನಗಳಲ್ಲಿ ಜನರು ಸೇರುವುದು, ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮ ಅಥವಾ ಉತ್ಸವಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಆದರೆ ನಿಯಮಗಳು ಮತ್ತು ಷರತ್ತುಗಳೊಂದಿಗೆ ಅಗತ್ಯ ಸೇವೆಗಳಿಗೆ ಅನುಮತಿಯಿರುತ್ತದೆ. ಆಹಾರ ಸರಬರಾಜು ಮಳಿಗೆಗಳು, ತರಕಾರಿ, ದಿನಸಿ, ಮೀನು-ಮಾಂಸದ ಅಂಗಡಿಗಳಿಗೆ ಹವಾನಿಯಂತ್ರಣ ವ್ಯವಸ್ಥೆಯಿಲ್ಲದೆ ಮಧ್ಯಾಹ್ನ 12 ರವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು ಎಂದು ಅಧಿಸೂಚನೆ ಹೊರಡಿಸಲಾಗಿದೆ.
ಇದನ್ನೂ ಓದಿ: ಮೇ 10ರಿಂದ ಎರಡು ವಾರಗಳ ಕಾಲ ತಮಿಳುನಾಡು ಲಾಕ್‌ಡೌನ್
ಪುದುಚೇರಿಯಲ್ಲಿ ನಿನ್ನೆ ಕಳೆದ 24 ಗಂಟೆಗಳಲ್ಲಿ 1,703 ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 19 ಮಂದಿ ಮೃತಪಟ್ಟಿದ್ದರು. ಈವರೆಗೆ ಕೇಂದ್ರಾಡಳಿತ ಪ್ರದೇಶದಲ್ಲಿ 70,076 ಕೇಸ್ಗಳು ಹಾಗೂ 939 ಸಾವು ವರದಿಯಾಗಿದೆ. ಒಟ್ಟು 13,585 ಕೇಸ್ಗಳು ಇನ್ನೂ ಸಕ್ರಿಯವಾಗಿವೆ.