ನವದೆಹಲಿ : ಮಾರ್ಚ್ 2023 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಂಚಿತ ಲಾಭವು ಒಂದು ಲಕ್ಷ ಕೋಟಿ ರುಪಾಯಿ ದಾಟಿದೆ ಎಂದು ತಿಳಿದು ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್‌ಬಿಐ) ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಒಟ್ಟು ಗಳಿಕೆಯ ಅರ್ಧದಷ್ಟು ಪಾಲು ಹೊಂದಿದೆ.
2017-18 ರಲ್ಲಿ ಒಟ್ಟು 85,390 ಕೋಟಿ ರುಪಾಯಿ ನಿವ್ವಳ ನಷ್ಟ ಹೊಂದಲಾಗಿತ್ತು. ಆದರೆ, 2022-23 ರಲ್ಲಿ 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳು (PSB) 1,04,649 ಕೋಟಿ ರುಪಾಯಿ ಲಾಭ ಗಳಿಸಿದ್ದು, 2021-22 ರಲ್ಲಿ ಗಳಿಸಿದ 66,539.98 ಕೋಟಿ ರುಪಾಯಿಗಳಿಗೆ ಹೋಲಿಸಿದರೆ ಒಟ್ಟು ಲಾಭದಲ್ಲಿ ಶೇ 57 ರಷ್ಟು ಹೆಚ್ಚಳ ಕಂಡಿವೆ.
ಶೇಕಡಾವಾರು ಲೆಕ್ಕದಲ್ಲಿ ನೋಡುವುದಾರೆ, ಪುಣೆ ಮೂಲದ ಬ್ಯಾಂಕ್ ಆಫ್ ಮಹಾರಾಷ್ಟ್ರ (BoM) ಅತ್ಯಧಿಕ ನಿವ್ವಳ ಲಾಭ ಬೆಳವಣಿಗೆ ಹೊಂದಿದೆ. ಈ ಬ್ಯಾಂಕ್ ಶೇ 126 ಏರಿಕೆಯೊಂದಿಗೆ 2,602 ಕೋಟಿ ರು ಗಳಿಸಿದೆ. ಹಾಗೆಯೇ, UCO ಶೇ 100 ರಷ್ಟು ಏರಿಕೆಯೊಂದಿಗೆ 1,862 ಕೋಟಿ ರೂ ಮತ್ತು ಬ್ಯಾಂಕ್ ಆಫ್ ಬರೋಡಾ ಶೇ 94 ಹೆಚ್ಚಳದೊಂದಿಗೆ 14,110 ಕೋಟಿ ರು. ಲಾಭ ಗಳಿಸಿದೆ. SBI 2022-23 ರಲ್ಲಿ 50,232 ಕೋಟಿ ರು.ಗಳಷ್ಟು ವಾರ್ಷಿಕ ಲಾಭ ವರದಿ ಮಾಡಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ 59 ಹೆಚ್ಚಳ ತೋರಿಸುತ್ತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹೊರತುಪಡಿಸಿ, ಇತರೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು (PSB) ತೆರಿಗೆಯ ನಂತರ ತಮ್ಮ ಲಾಭದಲ್ಲಿ ವಾರ್ಷಿಕ ಹೆಚ್ಚಳ ಹೊಂದಿವೆ. ದೆಹಲಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಾರ್ಷಿಕ ನಿವ್ವಳ ಲಾಭದಲ್ಲಿ ಶೇ 27 ರಷ್ಟು ಕುಸಿತ ಕಂಡಿದೆ. 2021-22 ರಲ್ಲಿ 3,457 ಕೋಟಿ ರು. ಒಟ್ಟು ಲಾಭ ಗಳಿಸಿದ್ದು, ಮಾರ್ಚ್ 2023 ರ ವರ್ಷದಲ್ಲಿ 2,507 ಕೋಟಿ ರೂ ಗಳಿಸಿದೆ.
ಇದನ್ನೂ ಓದಿ : 2 ಸಾವಿರ ರೂಪಾಯಿ ನೋಟುಗಳೊಂದಿಗೆ 4 ಲಕ್ಷ ರೂ. ತೆರಿಗೆ ಪಾವತಿಸಿದ ಬಸ್ ನಿರ್ವಾಹಕರು
ಇನ್ನು 10,000 ಕೋಟಿ ರು.ಗಿಂತ ಹೆಚ್ಚಿನ ವಾರ್ಷಿಕ ಲಾಭ ವರದಿ ಮಾಡಿರುವ ಸಾರ್ವಜನಿಕ ವಲಯದ ಬ್ಯಾಂಕ್‌ಗಳೆಂದರೆ ಬ್ಯಾಂಕ್ ಆಫ್ ಬರೋಡಾ (ರು. 14,110 ಕೋಟಿ) ಮತ್ತು ಕೆನರಾ ಬ್ಯಾಂಕ್ (ರು. 10,604 ಕೋಟಿ).
ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್‌ಗಳು ವಾರ್ಷಿಕ ಲಾಭದಲ್ಲಿ ಶೇ 26 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. (1,313 ಕೋಟಿ ರು. ) ಹಾಗೆಯೇ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 51 ಶೇ (ರು 1,582 ಕೋಟಿ), ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 23 ಶೇ (ರು 2,099 ಕೋಟಿ), ಬ್ಯಾಂಕ್ ಆಫ್ ಇಂಡಿಯಾ ಶೇ 18 (ರು. 4,023 ಕೋಟಿ), ಇಂಡಿಯನ್ ಬ್ಯಾಂಕ್ ಶೇ. 34 (ರು. 5,282 ಕೋಟಿ) ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶೇ.61 (ರು. 8,433 ಕೋಟಿ) ವಾರ್ಷಿಕ ಲಾಭ ಗಳಿಸಿದೆ.