ಕಾಸರಗೋಡು (ಕೇರಳ): ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಮೊಟ್ಟಮೊದಲ ಗೌರವ ಡಾಕ್ಟರೇಟ್ ಅನ್ನು 'ಪಯ್ಯೋಳಿ ಎಕ್ಸ್‌ಪ್ರೆಸ್' ಖ್ಯಾತಿಯ ಭಾರತೀಯ ಮಾಜಿ ಅಥ್ಲೀಟ್ ಪಿಟಿ ಉಷಾ ಅವರಿಗೆ ಘೋಷಣೆ ಮಾಡಲಾಗಿದೆ. ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆಯಾಗಿರುವ ಉಷಾ ಅವರು ಕ್ರೀಡಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರಕಟಿಸಿದೆ.
ಇದನ್ನೂ ಓದಿ: ಭಾರತೀಯ ಒಲಂಪಿಕ್ ಸಂಸ್ಥೆ ಅಧ್ಯಕ್ಷರಾಗಿ ಪಿಟಿ ಉಷಾ ಅವಿರೋಧ ಆಯ್ಕೆ
ದೇಶದಲ್ಲಿ ಅಥ್ಲೆಟಿಕ್ ಪರಂಪರೆಗೆ ನಾಂದಿ ಹಾಡಿದ್ದು ಪಿಟಿ ಉಷಾ. ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 19 ಚಿನ್ನ ಸೇರಿದಂತೆ 33 ಪದಕಗಳನ್ನು ಗೆದ್ದಿದ್ದಾರೆ. ಸತತ ನಾಲ್ಕು ಏಷ್ಯನ್ ಗೇಮ್ಸ್‌ಗಳಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಆಗಿದ್ದಾರೆ. 1985ರಲ್ಲಿ ಜಕಾರ್ತಾ ಏಷ್ಯನ್ ಅಥ್ಲೆಟಿಕ್ ಮೀಟ್‌ನಲ್ಲಿ ಐದು ಚಿನ್ನ ಸೇರಿದಂತೆ ಆರು ಪದಕಗಳನ್ನು ಗೆದ್ದಿದ್ದರು.
ದೇಶವೇ ಹೆಮ್ಮೆ ಪಡುವಂತಹ ಹಲವು ಕ್ಷಣಗಳನ್ನು ನೀಡಿದ ತಾರೆ ಉಷಾ ಆಗಿದ್ದಾರೆ. ಕಿನಾಲೂರಿನ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನ ಮುಖ್ಯಸ್ಥರಾಗಿದ್ದಾರೆ. ಹಲವಾರು ಯಶಸ್ವಿ ಕ್ರೀಡಾಪಟುಗಳನ್ನು ಸ್ಕೂಲ್ ಆಫ್ ಅಥ್ಲೆಟಿಕ್ಸ್ ಸಂಸ್ಥೆ ನೀಡಿದೆ. ಈ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನ ಹಲವು ಆಟಗಾರ್ತಿಯರು ಭಾರತಕ್ಕೆ ಇದುವರೆಗೆ 79 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ.
ಇದನ್ನೂ ಓದಿ: ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪಿಟಿ ಉಷಾ
ಈ ಬಗ್ಗೆ ಕುಲಪತಿ ಪ್ರೊ.ಎಚ್.ವೆಂಕಟೇಶ್ವರಲು ಮಾತನಾಡಿ, ರಾಷ್ಟ್ರಕ್ಕೆ ಮಾದರಿಯಾದವರನ್ನು ಗೌರವಿಸುವುದು ವಿಶ್ವವಿದ್ಯಾಲಯದ ಕರ್ತವ್ಯ. ಪಿಟಿ ಉಷಾ ಅವರ ಜೀವನ ಮತ್ತು ಸಾಧನೆಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವಂತವಾಗಿದೆ. ವಿಶ್ವವಿದ್ಯಾನಿಲಯವು ಆಯೋಜಿಸುವ ವಿಶೇಷ ಸಮಾರಂಭದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪಿಟಿ ಉಷಾ ಬಗ್ಗೆ ಮತ್ತಷ್ಟು ಮಾಹಿತಿ.. 58 ವರ್ಷದ ಪಿಟಿ ಉಷಾ, ಮಾಜಿ ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಯಾಗಿದ್ದಾರೆ. 2022ರ ಜುಲೈನಲ್ಲಿ ಉಷಾ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಇದಾದ ನಂತರ ನವೆಂಬರ್‌ನಲ್ಲಿ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಈ ಮೂಲಕ ಒಲಂಪಿಕ್ ಸಂಸ್ಥೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಯನ್ನೂ ಉಷಾ ಹೊಂದಿದ್ದಾರೆ.
ಇತ್ತೀಚೆಗೆ ರಾಜ್ಯಸಭೆಯಲ್ಲಿ ಸಭಾಪತಿ ಮತ್ತು ಉಪಸಭಾಪತಿಗಳ ಅನುಪಸ್ಥಿತಿಯಲ್ಲಿ ಸದಸ್ಯೆಯಾದ ಪಿಟಿ ಉಷಾ ಅವರು ಕಲಾಪದ ಅಧ್ಯಕ್ಷತೆ ವಹಿಸಿದ್ದರು. ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದ ಅವರು, "ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಹೇಳಿದಂತೆ ದೊಡ್ಡ ಸ್ಥಾನದೊಂದಿಗೆ ದೊಡ್ಡ ಜವಾಬ್ದಾರಿ ಬರುತ್ತದೆ. ರಾಜ್ಯಸಭಾ ಅಧಿವೇಶನ ನಡೆಸುವಾಗ ನನಗೂ ಇದೇ ಭಾವನೆ ಮೂಡಿತು. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯೊಂದಿಗೆ ಈ ಪ್ರಯಾಣದಲ್ಲಿ ಇನ್ನಷ್ಟು ಮೈಲಿಗಲ್ಲುಗಳನ್ನು ಸೃಷ್ಟಿಸಲು ನಾನು ಆಶಿಸುತ್ತೇನೆ" ಎಂದು ಹೇಳಿದ್ದರು.
ಇದನ್ನೂ ಓದಿ: ರಾಜ್ಯಸಭಾಧ್ಯಕ್ಷರ ಪೀಠದಲ್ಲಿ ಪಿ.ಟಿ.ಉಷಾ- ವಿಡಿಯೋ