ಮುಂಬೈ : ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆ ಮೈತ್ರಿ ಸರ್ಕಾರ ಮಂಡಿಸಿದ ರಾಜ್ಯ ಬಜೆಟ್‌ನ ವಿರುದ್ಧ ವಿರೋಧ ಪಕ್ಷದ ನಾಯಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ವಿಧಾನ ಭವನ ಹೊರಗೆ ಕೈಯಲ್ಲಿ ಕುಂಬಳಕಾಯಿಗಳನ್ನು ಹಿಡಿದುಕೊಂಡು ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿ ಗಮನಸೆಳೆದರು. ರಾಜ್ಯ ಸರ್ಕಾರವು ರಾಜ್ಯ ಬಜೆಟ್‌ನಲ್ಲಿ ಸಾರ್ವಜನಿಕರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ ಬಜೆಟ್ ಅನ್ನು ಟೀಕಿಸಿದರು. ರಾಜ್ಯ ಬಜೆಟ್‌ನಲ್ಲಿ ಕೇವಲ ಹುಸಿ ಭರವಸೆಗಳನ್ನು ನೀಡಲಾಗಿದೆ. ಇಂದು ಆಶ್ವಾಸನೆ ನೀಡುತ್ತಿರುವವರು ದೇಶದ್ರೋಹಿಗಳಾಗಿದ್ದು, ಅವರನ್ನು ಹೇಗೆ ನಂಬುವುದು ಎಂದು ಆದಿತ್ಯ ಠಾಕ್ರೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದ ಹಣಕಾಸು ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು. ಮಹಾರಾಷ್ಟ್ರ ಬಜೆಟ್ 2023-24 'ಪಂಚಾಮೃತ' ತತ್ವವನ್ನು ಆಧರಿಸಿದೆ. ಇದು ರೈತರು, ಮಹಿಳೆಯರು, ಯುವಕರು, ಉದ್ಯೋಗ ಮತ್ತು ಪರಿಸರದ ಮೇಲೆ ಕೇಂದ್ರೀಕೃತ ಬಜೆಟ್ ಆಗಿದೆ ಎಂದು ಸರ್ಕಾರ ಹೇಳಿದೆ.
ಎಲ್ಲಾ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ರಿಯಾಯಿತಿ ನೀಡುವುದಾಗಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಘೋಷಿಸಿದೆ. ಸ್ಟ್ಯಾಂಪ್ ಡ್ಯೂಟಿಯಲ್ಲಿ ಮಹಿಳೆಯರಿಗೆ ಶೇಕಡಾ ಒಂದರಷ್ಟು ರಿಯಾಯಿತಿ ಸಿಗಲಿದೆ. ನಮ್ಮ ದವಾಖಾನೆ ಯೋಜನೆಯನ್ನು ಕೂಡ ಮಹಾರಾಷ್ಟ್ರ ಸರ್ಕಾರ ವಿಸ್ತರಿಸಲಿದೆ. ನಾವು ಪ್ರಾರಂಭಿಸಿದ ಯೋಜನೆಗೆ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಈಗ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಹೆಸರಿನಲ್ಲಿ ಇಡೀ ರಾಜ್ಯದಲ್ಲಿ 700 ನಮ್ಮ ದವಾಖಾನಾ ಡಿಸ್ಪೆನ್ಸರಿಗಳನ್ನು ಪ್ರಾರಂಭಿಸಲಾಗುವುದು. ಇವುಗಳ ಮೂಲಕ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ದೇವೇಂದ್ರ ಫಡ್ನವಿಸ್ ಬಜೆಟ್ ಮಂಡಿಸುವಾಗ ಹೇಳಿದರು. ಕೇಂದ್ರದ ನೆರವಿನೊಂದಿಗೆ ರಾಜ್ಯ ಸರ್ಕಾರ ಸಾಂಪ್ರದಾಯಿಕ ಮೀನುಗಾರರಿಗೆ ಐದು ಲಕ್ಷ ರೂಪಾಯಿ ವಿಮಾ ಯೋಜನೆಯನ್ನೂ ಘೋಷಿಸಿದೆ.
2022ರ ಸೆಪ್ಟೆಂಬರ್‌ನಲ್ಲಿ ಮೃತಪಟ್ಟ ಬುಡಕಟ್ಟು ಬಾಲಕಿಯೊಬ್ಬಳು ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದಳು ಎಂದು ಮಹಾರಾಷ್ಟ್ರದ ಬುಡಕಟ್ಟು ಅಭಿವೃದ್ಧಿ ಸಚಿವ ವಿಜಯ್‌ಕುಮಾರ್ ಗವಿತ್ ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. ಬುಡಕಟ್ಟು ಮಕ್ಕಳಿಗಾಗಿ ನಡೆಸುವ ‘ಆಶ್ರಮ ಶಾಲೆ’ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರು ತಿಂಗಳ ಹಿಂದೆ ನಾಸಿಕ್ ಜಿಲ್ಲೆಯ 10 ವರ್ಷದ ಬುಡಕಟ್ಟು ಬಾಲಕಿಯ ಸಾವಿನ ಬಗ್ಗೆ ಪ್ರತಿಕ್ರಿಯಿಸಿದರು. ಬಾಲಕಿಯನ್ನು ಅಹ್ಮದ್‌ನಗರ ಜಿಲ್ಲೆಯಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಕೆ ಅಸ್ವಸ್ಥಳಾಗಿದ್ದಾಗ ಆಕೆಯ ಉದ್ಯೋಗದಾತ ಆಕೆಯನ್ನು ಪೋಷಕರ ಮನೆಯ ಹೊರಗೆ ಎಸೆದು ಹೋಗಿದ್ದ. ದೇಹದ ಮೇಲೆ ಗಾಯಗಳಾಗಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಸಚಿವರು ಮಾಹಿತಿ ನೀಡಿದರು.
ಮೃತ ಬಾಲಕಿಯನ್ನು ಮಾರಾಟ ಮಾಡಲಾಗಿತ್ತೇ ಎಂದು ತಿಳಿಸುವಂತೆ ಅಂಬಾದಾಸ್ ದಾನ್ವೆ, ಏಕನಾಥ್ ಖಾಡ್ಸೆ ಮತ್ತು ಶಶಿಕಾಂತ್ ಶಿಂಧೆ ಸೇರಿದಂತೆ ವಿರೋಧ ಪಕ್ಷದ ನಾಯಕರು ಸರ್ಕಾರವನ್ನು ಒತ್ತಾಯಿಸಿದರು. ಬಾಲಕಿಯನ್ನು ಮಾರಾಟ ಮಾಡಲಾಗಿರಲಿಲ್ಲ ಆದರೆ ಆಕೆ ಜೀತದಾಳು ಆಗಿದ್ದಳು. ಅಹ್ಮದ್‌ನಗರದ ಪಾರ್ನರ್ ತೆಹಸಿಲ್‌ನಲ್ಲಿ ಕುಟುಂಬದೊಂದಿಗೆ ಕೆಲಸ ಮಾಡುತ್ತಿದ್ದಳು ಎಂದು ಸಚಿವ ವಿಜಯ್‌ಕುಮಾರ್ ಗವಿತ್ ತಿಳಿಸಿದರು.
ಇದನ್ನೂ ಓದಿ : ಶಾರುಖ್ ಖಾನ್ ಐಷಾರಾಮಿ 'ಮನ್ನತ್' ಬಂಗಲೆಗೆ ನುಗ್ಗಿದ ಇಬ್ಬರು ಪೊಲೀಸ್ ವಶಕ್ಕೆ