ಚೆನ್ನೈ(ತಮಿಳುನಾಡು):ಮಾಜಿ ಸಚಿವರು ನೀಡಿದ ದೂರಿನ ಆಧಾರದ ಮೇಲೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ನಾಯಕಿ ವಿಕೆ ಶಶಿಕಲಾ ಮತ್ತು ಅವರ ಬೆಂಬಲಿಗರ ವಿರುದ್ಧ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ರೋಶಾನಾಯ್ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ತಮಿಳುನಾಡಿನ ಮಾಜಿ ಸಚಿವ ಹಾಗೂ ಉತ್ತರ ವಿಲ್ಲುಪುರಂ ಜಿಲ್ಲೆಯ AIADMK ಕಾರ್ಯದರ್ಶಿ ಷಣ್ಮುಗಂ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಶಶಿಕಲಾ ಮತ್ತು 501 ಬೆಂಬಲಿಗರು ಸೇರಿದಂತೆ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಷಣ್ಮುಗಂ ಅವರು ಶಶಿಕಲಾ ವಿರುದ್ಧ ಇದೇ 9 ನೇ ತಾರೀಖಿನಂದು ಪ್ರಕರಣ ದಾಖಲಿಸಿದ್ದು, 500 ಜನರು ಮೊಬೈಲ್ ಫೋನ್ ಮತ್ತು ಸೋಷಿಯಲ್ ಮೀಡಿಯಾ ಮೂಲಕ ನನ್ನನ್ನು ಸಂಪರ್ಕಿಸಿದ್ದಾರೆ ಮತ್ತು ನಾನು ಶಶಿಕಲಾ ಅವರ ಬೆಂಬಲಿಗರನ್ನು ಕೆರಳಿಸಿದರೆ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಷಣ್ಮುಗಂ ಆರೋಪಿಸಿದ್ದು, ಅದರಂತೆ ಶಶಿಕಲಾ ಮತ್ತು 500 ಶಶಿಕಲಾ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದರು.
ಇದೀಗ ಶಶಿಕಲಾ ಸೇರಿದಂತೆ 501 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಸೆ. 506 (1) - ಕೊಲೆ ಬೆದರಿಕೆ, 507 - ತಮ್ಮ ವಿಳಾಸ ತಿಳಿಸದೇ ಅಸಭ್ಯ ಮಾತು, ಸೆ. 109 - ಪ್ರಚೋದನಕಾರಿ ಭಾಷಣ, 67 (IP Act) - ಐಟಿ ಆ್ಯಕ್ಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಮಾಹಿತಿಯನ್ನು ಪೋಸ್ಟ್ ಮಾಡುವುದು ಸೇರಿದಂತೆ ನಾಲ್ಕು ವಿಭಾಗಗಳ ಅಡಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.