ವಾಷಿಂಗ್ಟನ್: H-1B ವೀಸಾಗಳಿಗೆ ಅಮೆರಿಕದೊಳಗಡೆಯೇ ವೀಸಾ ಸ್ಟ್ಯಾಂಪ್ ಹಾಕುವ ಪ್ರಸ್ತಾವನೆಗೆ ಏಶಿಯನ್ ಅಮೆರಿಕನ್ಸ್ ಮತ್ತು ಪೆಸಿಫಿಕ್ ಐಲ್ಯಾಂಡರ್ಸ್ ಮೇಲಿನ ಅಧ್ಯಕ್ಷೀಯ ಆಯೋಗವು ಅನುಮೋದನೆ ನೀಡಿದೆ. ಈ ಪ್ರಸ್ತಾವನೆಗೆ ಅಧ್ಯಕ್ಷ ಜೋ ಬೈಡನ್ ಒಪ್ಪಿಗೆ ನೀಡಿದಲ್ಲಿ ಭಾರತ ಸೇರಿದಂತೆ ಹಲವಾರು ದೇಶಗಳ ವೃತ್ತಿಪರರಿಗೆ ವರದಾನವಾಗಲಿದೆ.
H-1B ವೀಸಾ ವಲಸೆ ರಹಿತ ವೀಸಾ ಆಗಿದ್ದು, ಇದು ಅಮೆರಿಕದ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತಾರು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.
ಈಗಿರುವ ಕಡ್ಡಾಯ ನಿಯಮಾವಳಿಗಳ ಪ್ರಕಾರ, H-1B ಆ್ಯಕ್ಟಿವೇಟ್ ಮಾಡುವ ಮುನ್ನ ವೀಸಾ ಆಕಾಂಕ್ಷಿಯು ವಿದೇಶದಲ್ಲಿರುವ ಯುಎಸ್ ಕಾನ್ಸುಲೇಟ್ ಅಥವಾ ರಾಯಭಾರ ಕಚೇರಿಯಲ್ಲಿ ವೀಸಾ ಸ್ಟ್ಯಾಂಪ್ ಹಾಕಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕಿದೆ. ಬುಧವಾರ ಶ್ವೇತಭವನದಲ್ಲಿ ನಡೆದ ಏಷ್ಯನ್ ಅಮೆರಿಕನ್ನರು, ಸ್ಥಳೀಯ ಹವಾಯಿಗಳು ಮತ್ತು ಪೆಸಿಫಿಕ್ ದ್ವೀಪವಾಸಿಗಳ ಮೇಲಿನ ಅಧ್ಯಕ್ಷರ ಸಲಹಾ ಆಯೋಗದ ಸಭೆಯಲ್ಲಿ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಯೋಗದ ಸದಸ್ಯರಾದ ಇಂಡಿಯನ್ ಅಮೆರಿಕನ್ ಅಜಯ್ ಜೈನ್ ಭುಟೋರಿಯಾ ಎಂಬುವರು ಈ ಪ್ರಸ್ತಾವನೆ ಮಂಡಿಸಿದ್ದಾರೆ.
ಇವರಲ್ಲಿ ಬಹುತೇಕರು ಹೊಸದಾಗಿ ವೀಸಾ ಪಡೆಯುವವರಾಗಿದ್ದಾರೆ ಅಥವಾ ವೀಸಾ ನವೀಕರಣ ಮಾಡಿಸಿಕೊಳ್ಳಲು ಬಯಸುತ್ತಿದ್ದಾರೆ. ಆದರೆ, ಇವರೆಲ್ಲರೂ ಸುದೀರ್ಘಾವಧಿಯ ಕಾಯುವಿಕೆಯ ಕಾರಣದಿಂದ ಅನಿಶ್ಚಿತ ಪರಿಸ್ಥಿತಿ ಎದುರಿಸುವಂತಾಗಿದೆ. ಭಾರತದಂಥ ದೇಶದಲ್ಲಿ ಈ ಕಾಯುವಿಕೆಯ ಅವಧಿ ಒಂದು ವರ್ಷಕ್ಕೂ ಹೆಚ್ಚಾಗಿದೆ.
ನಮ್ಮ ವಲಸೆ ಪ್ರಕ್ರಿಯೆಯ ಭಾಗವಾಗಿ, H-1B ವೀಸಾ ಹೊಂದಿರುವವರಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ. ಅಮೆರಿಕದಲ್ಲಿ ವಾಸಿಸಿ ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಅವರು ಕೊಡುಗೆ ನೀಡಲು ಅವಕಾಶ ನೀಡಲಾಗುತ್ತದೆ ಎಂದು ಸಭೆಯಲ್ಲಿ ಭುಟೋರಿಯಾ ಹೇಳಿದರು. ಸಭೆಯ ಪ್ರಕ್ರಿಯೆಗಳನ್ನು ವೈಟ್ ಹೌಸ್ನಿಂದ ಲೈವ್ ಪ್ರಸಾರ ಮಾಡಲಾಗಿತ್ತು. H-1B ಹೊಂದಿರುವವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೀಸಾ ನವೀಕರಣ ಮಾಡಿಸುವಾಗ ಅಥವಾ ವಿದೇಶಕ್ಕೆ ಹೋದಾಗ ಅವರು ತಮ್ಮ ಕುಟುಂಬದಿಂದ ಬೇರ್ಪಡೆಯಾಗುವ ಸಂದರ್ಭಗಳು ಎದುರಾಗುತ್ತಿವೆ ಎಂದು ಭುಟೋರಿಯಾ ಆಯೋಗದ ಸದಸ್ಯರ ಗಮನಸೆಳೆದರು.
ಇದನ್ನು ಓದಿ:ಆರ್ಬಿಐ ರೆಪೊ ದರ ಹೆಚ್ಚಳ: ಸಾಲ ಹಾಗೂ ಎಫ್ಡಿ ಬಡ್ಡಿಯೂ ಏರಿಕೆ