ನವದೆಹಲಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ 'ರಾಜೀವ್ ಕ್ರಾಂತಿ' ಅಭಿಯಾನ ಆರಂಭಿಸಲು ನಿರ್ಧಾರ ಕೈಗೊಂಡಿದ್ದು, ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ಇದಕ್ಕೆ ನಾಳೆ ಚಾಲನೆ ನೀಡಲಿದ್ದಾರೆ. ದೇಶದ ಯುವ ಜನರೊಂದಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಈ ಅಭಿಯಾನ ಪ್ರಾರಂಭ ಮಾಡಲು ಮುಂದಾಗಿದೆ.
ರಾಷ್ಟ್ರರಾಜಧಾನಿ ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಾಳೆ(ಮೇ 21) ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇದರಲ್ಲಿ ಪ್ರಿಯಾಂಕಾ ಗಾಂಧಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. ಇವರಿಗೆ ಅನೇಕ ಹಿರಿಯ ನಾಯಕರು ಸಾಥ್ ನೀಡಲಿದ್ದಾರೆ ಎಂದು ಎಐಸಿಸಿ ಹಿರಿಯ ಪದಾಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ವಿದೇಶಕ್ಕೆ ತೆರಳುತ್ತಿರುವ ಕಾರಣ ಸಭೆಯಲ್ಲಿ ಭಾಗಿಯಾಗುತ್ತಿಲ್ಲ.
ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭಗೊಳ್ಳಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ದೇಶದ ಯುವಕರನ್ನ ಮುನ್ನಲೆಗೆ ತರುವ ಉದ್ದೇಶ ಹೊಂದಲಾಗಿದ್ದು, ಅದಕ್ಕಾಗಿ ರಾಜೀವ್ ಕ್ರಾಂತಿ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ. ರಾಜೀವ್ ಗಾಂಧಿ ದೇಶದ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಟೆಲಿಕಾಂ ಕ್ರಾಂತಿಗೆ ನಾಂದಿ ಹಾಡಿದ್ದು, 18 ವರ್ಷದವರಿಗೆ ಮತದಾನದ ಹಕ್ಕು ಅಧಿಕಾರ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದ ಶ್ರೇಯ ಸಲ್ಲುತ್ತದೆ.
ಇದನ್ನೂ ಓದಿ: ಭೀಕರ ಅಪಘಾತ: ಡೀಸೆಲ್ ಟ್ಯಾಂಕರ್, ಟ್ರಕ್ ನಡುವೆ ಡಿಕ್ಕಿಯಾಗಿ 9 ಜನರ ಸಜೀವ ದಹನ
1991ರ ಮೇ. 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಭಾಷಣ ಮಾಡಲು ತೆರಳಿದ್ದ ವೇಳೆ ಆತ್ಮಾಹುತಿ ಬಾಂಬರ್ನಿಂದ ಪ್ರಧಾನಿ ರಾಜೀವ್ ಗಾಂಧಿ ಇಹಲೋಕ ತ್ಯಜಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಪೆರಾರಿವಾಲ್ ಬರೋಬ್ಬರಿ 31 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ನಿರ್ದೇಶನದ ಮೇಲೆ ಹೊರ ಬಂದಿದ್ದಾರೆ. ನಾಳೆಯ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಾಡುಗೊಂಡಿವೆ. ಇದರ ಜೊತೆಗೆ ರಕ್ತದಾನ ಶಿಬಿರ, ಮಾಜಿ ಪ್ರಧಾನಿಯವರ ಛಾಯಚಿತ್ರ ಪ್ರದರ್ಶನ ಮತ್ತು ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗಿಯಾಗುವ ಸಾಧ್ಯತೆ ದಟ್ಟವಾಗಿದೆ.
2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಕಳೆದ ಕೆಲ ದಿನಗಳ ಹಿಂದೆ ರಾಜಸ್ಥಾನದಲ್ಲಿ ಚಿಂತನಾ ಶಿಬಿರ ಆಯೋಜನೆ ಮಾಡಿತ್ತು. ಇದರಲ್ಲಿ ದೇಶದ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.