ಇಂದೋರ್ (ಮಧ್ಯಪ್ರದೇಶ): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಇಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ತಮ್ಮ ಭೇಟಿಯ ವೇಳೆ ಮಾತನಾಡಿದ ರಾಬರ್ಟ್ ವಾದ್ರಾ, ಗಾಂಧಿ ಕುಟುಂಬದ ಸದಸ್ಯನಾದ ನಾನು, ಅವರಿಂದ ಹಲವಾರು ವಿಷಯಗಳನ್ನು ಕಲಿತಿದ್ದೇನೆ. ದೊಡ್ಡ ಶಕ್ತಿಯೊಂದಿಗೆ, ದೊಡ್ಡ ಜವಾಬ್ದಾರಿ ಬರುತ್ತಿದೆ. ಈಗಾಗಲೇ ನಾನು ಹಲವಾರು ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದೇನೆ. ಕಷ್ಟದ ಸಮಯವನ್ನು ಎದುರಿಸಿದ್ದೇನೆ. ಆ ಕಷ್ಟದ ಸಮಯ ನನ್ನನ್ನು ಬಲಿಷ್ಠಗೊಳಿಸಿವೆ ಎಂದಿದ್ದಾರೆ.
ನಾನು ರಾಜಕೀಯವನ್ನು ಅರ್ಥಮಾಡಿಕೊಂಡಿದ್ದೇನೆ. ನನ್ನ ಚಾರಿಟಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಾನು ಕಳೆದ 10 ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದೇನೆ. ಅದಕ್ಕಿಂತಲೂ ಹೆಚ್ಚಿನದನ್ನು ನಾನು ಮಾಡಲು ಬಯಸುತ್ತಿದ್ದೇನೆ. ನಾನು ರಾಜಕೀಯಕ್ಕೆ ಸೇರಲು ಎಷ್ಟು ಸಮಯ ಬೇಕಾದ್ರು ಆಗಲಿ, ಅಲ್ಲಿಯವರೆಗೆ ನನ್ನ ಜನ ಸೇವೆ ಮುಂದುವರಿಯುತ್ತದೆ. ಆದರೆ ರಾಜಕೀಯಕ್ಕೆ ಸೇರಿದ ನಂತರ ನಾನು ಸಾರ್ವಜನಿಕ ಸೇವೆಯನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತೇನೆ ಎಂದು ಹೇಳಿದರು.
ಓದಿ: ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ ಪತಿ: ರಾಬರ್ಟ್ ವಾದ್ರಾ ಸ್ಪರ್ಧಿಸುವ ಕ್ಷೇತ್ರ ಯಾವುದು?
ಇಂದು ಕೂಡ ನಾನು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದೇನೆ. ಜನರು ನನ್ನ ಹೆಸರನ್ನು ಒಳ್ಳೆಯ ಕೆಲಸಕ್ಕೆ ಬಳಸುತ್ತಾರೆ ಎಂಬ ಭರವಸೆ ನನಗಿದೆ. ಮುಂದೆ ಈ ಬಗ್ಗೆ ಏನಾಗುತ್ತದೆ ಎಂದು ನೋಡೋಣ ಎಂದರು. ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಮಾತನಾಡಿದ ವಾದ್ರಾ, ದೇಶದ ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಾನು ನನ್ನ ಕುಟುಂಬ ಮತ್ತು ಮಕ್ಕಳೊಂದಿಗೆ ಚರ್ಚಿಸುತ್ತೇನೆ. ದೇಶ ಬದಲಾಗುತ್ತಿದೆ ಮತ್ತು ಕೆಲವೊಂದರ ಮೇಲೆ ನನಗೆ ಅಸಮಾಧಾನವಿದೆ. ಮಾಧ್ಯಮಗಳು ಹಿಂಜರಿಯುತ್ತಿವೆ. ಮಾಧ್ಯಮಗಳು ನಿಜ ಸಂಗತಿಗಳನ್ನು ಹೇಳಲು ಹಿಂದೇಟು ಹಾಕುತ್ತವೆ. ಇದು ಪ್ರಜಾಪ್ರಭುತ್ವವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.