ಸಿತಾಪುರ್(ಉತ್ತರಪ್ರದೇಶ): ರಾಜ್ಯದಲ್ಲಿ ಶಾಂತಿ ಕದಡಲು ಯತ್ನಿಸಿದ ಆರೋಪದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ 11 ಮಂದಿ ವಿರುದ್ಧ ಯುಪಿ ಪೊಲೀಸರು ಎಫ್‌ಐಆರ್ ದಾಖಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಹರಗಾಂವ್ ಪೊಲೀಸ್ ಠಾಣೆ ಎಸ್‌ಹೆಚ್‌ಒ ಬ್ರಿಜೇಶ್ ತ್ರಿಪಾಠಿ, ಪ್ರಿಯಾಂಕಾ ಗಾಂಧಿ, ದೇವೇಂದ್ರ ಹೂಡಾ, ಹಾಗೂ ಅಜಯ್ ಕುಮಾರ್ ಲಲ್ಲೂ ಸೇರಿದಂತೆ 11 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 107/16ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಲಖೀಂಪುರ್ ಖೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಪ್ರಿಯಾಂಕಾ ಅವರನ್ನು ತಡೆದಿದ್ದ ಪೊಲೀಸರು ಬಂಧಿಸಿದ್ದರು. ಯಾವುದೇ ಆದೇಶ ಅಥವಾ ಎಫ್ಐಆರ್ ಇಲ್ಲದೇ ಕಳೆದ 28 ಗಂಟೆಗಳ ಕಾಲ ತನ್ನನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಕಳೆದ ಭಾನುಭಾವರ ಖಲೀಂಪುರ್ ಖೇರಿಯಲ್ಲಿ ಕಾರು ಹರಿಸಿದ ಪ್ರಕರಣದಲ್ಲಿ ರೈತರು ಸೇರಿ 8 ಮಂದಿ ಮೃತಪಟ್ಟಿದ್ದರು.
ಇದನ್ನೂ ಓದಿ: ರೈತರ ಮೇಲೆ ಕಾರು ಹರಿಸಿದ ಪ್ರಕರಣ: ವಿಡಿಯೋ ಹಂಚಿಕೊಂಡ ಪ್ರಿಯಾಂಕಾ ಗಾಂಧಿ
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಕಾರು ಹರಿಸಿದ್ದ ಘಟನೆಯಲ್ಲಿ ನಾಲ್ವರು ರೈತರು ಮೃತಪಟ್ಟಿರುವುದಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. ಮೃತ ನಾಲ್ವರು ರೈತರ ಪೈಕಿ ಒಬ್ಬರನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪಿಸಿದ್ದರು, ಉಳಿದ ಮೂವರ ಮೇಲೆ ಬೆಂಗಾವಲಿನ ವಾಹನಗಳ ಹರಿದಿದೆ ಎಂದು ಆರೋಪಿಸಲಾಗಿದೆ.
'ಪುತ್ರ ತನಿಖಾಧಿಕಾರಿಗಳ ಎದುರು ಹಾಜರಾಗಲು ಸಿದ್ಧ'
ಘಟನೆ ಸಂಬಂಧ ಪುತ್ರನ ವಿರದ್ಧದ ಆರೋಪಗಳನ್ನು ತಳ್ಳಿ ಹಾಕಿರುವ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ, ಪುತ್ರ ಆಶೀಶ್ ಮಿಶ್ರಾ ಟೆನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಯಾವುದೇ ತನಿಖೆಗೆ ತಮ್ಮ ಪುತ್ರ ಸಿದ್ಧನಿದ್ದಾನೆ. ದೇಶದ ಕಾನೂನಿನ ನಿಯಮದಡಿ ದೂರು ದಾಖಲಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಸ್ಥಳದಲ್ಲಿನ ದಾಖಲೆಗಳನ್ನು ಆಧರಿಸಿ ಪ್ರಕರಣದಿಂದ ಮುಕ್ತರಾಗುತ್ತಾನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ತನಿಖೆಯಲ್ಲಿ ದಾಖಲಾಗಿರುವ ನಮ್ಮ ಫೋನ್ ಕರೆಗಳು, ಲೊಕೇಷನ್ ಸೇರಿದಂತೆ ಎಲ್ಲಾ ರೀತಿಯಲ್ಲೂ ಪರಿಶೀಲನೆ ಮಾಡಲಿ. ಘಟನೆ ನಡೆದಾಗ ನನ್ನ ಪುತ್ರ ಸ್ಥಳದಲ್ಲೇ ಇರಲಿಲ್ಲ. ಹೀಗಾಗಿ ಆತ ಕ್ಲೀನ್ ಚಿಟ್ ಪಡೆಯುತ್ತಾನೆ. ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಪುತ್ರ ಸಿದ್ಧನಿದ್ದಾನೆ ಎಂದು ಸಚಿವ ಅಜಯ್ ಮಿಶ್ರಾ ಟೆನಿ ಹೇಳಿದ್ದಾರೆ.
ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಟೆನಿ, ಆ ವಿಡಿಯೋದಲ್ಲಿ ರೈತರನ್ನು ಹೊಡೆದ ಚಾಲಕನನ್ನು ಸ್ಥಳದಲ್ಲೇ ಹೊಡೆದು ಸಾಯಿಸಲಾಗಿದೆ ಎಂಬುದು ಸ್ಪಷ್ಟವಾಗಿ ಕಾಣಬಹುದು. ಆದ್ದರಿಂದ ನನ್ನ ಮಗ ರೈತರ ಮೇಲೆ ಕಾರು ಹರಿಸಿದ್ದರೆ ಅವನನ್ನು ಕೊಲ್ಲಲಾಗುತ್ತಿತ್ತು ಎಂದಿದ್ದಾರೆ.