ಪಾಟ್ನಾ (ಬಿಹಾರ): ಹೋಳಿ ಹಬ್ಬದ ಆಚರಣೆಯ ನಂತರ ಆರಂಭವಾಗಲಿರುವ ಬಿಹಾರ ಆವೃತ್ತಿಯ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬದಲಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗವಹಿಸುವ ಹಾಗೂ ಗಯಾದಲ್ಲಿ ಅಂತ್ಯಗೊಳ್ಳುವ ಯಾತ್ರೆಯಲ್ಲಿ ಭಾಷಣ ಮಾಡುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಹೇಳಿದ್ದಾರೆ.
ಬಿಹಾರದಲ್ಲಿ ಹೋಳಿ ಹಬ್ಬದ ಆಚರಣೆಯ ನಂತರ ಬಿಹಾರ ಪ್ರದೇಶ್ ಕಾಂಗ್ರೆಸ್ ಸಮಿತಿಯ ಭಾರತ್ ಜೋಡೋ ಯಾತ್ರೆಯ ಕೊನೆಯ ಹಂತ ಆರಂಭವಾಗಲಿದೆ. ಈ ಯಾತ್ರೆಯೂ ಪಾಟ್ನಾದ ಫುಲ್ವಾರಿ ಷರೀಫ್ನಿಂದ ಪ್ರಾರಂಭವಾಗಿ ಬೋಧ್ ಗಯಾ ತಲುಪಲಿದೆ. ಈ ಹಿಂದೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಿಹಾರ್ ಪ್ರದೇಶ್ ಕಾಂಗ್ರೆಸ್ ಸಮಿತಿ ಭಾರತ್ ಜೋಡೋ ಯಾತ್ರೆಯ ಕೊನೆ ದಿನದಂದು ರ‍್ಯಾಲಿ ಉದ್ದೇಶಿಸಿ ಮಾತನಾಡಲು ಗಯಾಕ್ಕೆ ಬರಬಹುದು ಎಂಬ ಮಾತುಗಳು ಕೇಳಿ ಬಂದಿತ್ತು.
ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ ಸದಕತ್ ಆಶ್ರಮದಲ್ಲಿ ರಾಜ್ಯಾಧ್ಯಕ್ಷ ಡಾ ಅಖಿಲೇಶ್ ಪ್ರಸಾದ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರನೇ ಹಂತದ ಪಾದಯಾತ್ರೆ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ರಾಜ್ಯಾಧ್ಯಕ್ಷರು ಪ್ರಿಯಾಂಕಾ ಗಾಂಧಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪಷ್ಟ ಸೂಚನೆಗಳಿವೆ. ಪ್ರಿಯಾಂಕಾ ಗಾಂಧಿ ವಾದ್ರಾ ಗಯಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಹಾರದ ಜನರು ಕೂಡ ಪ್ರಿಯಾಂಕಾ ಗಾಂಧಿಯನ್ನು ನೋಡಬೇಕು ಹಾಗೂ ಅವರ ಮಾತುಗಳನ್ನು ಕೇಳಬೇಕು ಎಂದು ಬಹಳ ದಿನಗಳಿಂದ ಅಪೇಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.
ಭಾರತ್ ಜೋಡೋ ಯಾತ್ರೆಗೆ ಸಂಬಂಧಪಟ್ಟ ಜಿಲ್ಲಾ, ಬ್ಲಾಕ್ ಅಧ್ಯಕ್ಷರು ಸೇರಿದಂತೆ ರಾಜ್ಯ ಮಟ್ಟದ ನಾಯಕರ ಜವಾಬ್ದಾರಿ ನಿಗದಿಪಡಿಸಲಾಗಿದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ಈ ಮೊದಲು, ಈ ಯಾತ್ರೆಯ ನಾಲ್ಕನೇ ಹಂತವನ್ನು ಫೆಬ್ರವರಿ 25 ರಿಂದ 26 ರವರೆಗೆ ನಡೆಸುವಂತೆ ಪ್ರಸ್ತಾಪಿಸಲಾಗಿತ್ತು, ಆದರೆ, ಛತ್ತೀಸ್‌ಗಢದಲ್ಲಿ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆಯುತ್ತಿರುವ ಕಾರಣ, ನಾಲ್ಕನೇ ಹಂತದ ಯಾತ್ರೆಯ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಹೋಳಿ ನಂತರ ಪಾಟ್ನಾದ ಪುಲ್ವಾರಿ ಷರೀಫ್ನಿಂದ ಕೊನೆಯ ಹಂತದ ರ‍್ಯಾಲಿ ಆರಂಭವಾಗಿ ಗಯಾವರೆಗೆ 115 ಕಿ ಮೀ ಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಮಾದರಿಯಲ್ಲಿ ಬಿಹಾರ ಕಾಂಗ್ರೆಸ್ ಕೂಡ ಪಾದಯಾತ್ರೆ ಆರಂಭಿಸಿದ್ದು, ಅದರ ಮೂರು ಹಂತಗಳು ಪೂರ್ಣಗೊಂಡಿದ್ದು, ಹೋಳಿ ನಂತರ ಕೊನೆಯ ಹಂತವನ್ನು ಆರಂಭಿಸಲಾಗುವುದು. ಜನವರಿ 5 ರಂದು ಬಂಕಾ ಜಿಲ್ಲೆಯ ಮಂದರ್ ಪರ್ವತದಿಂದ ರಾಜ್ಯದಲ್ಲಿ ಯಾತ್ರೆ ಪ್ರಾರಂಭಿಸಲಾಗಿತ್ತು. ಯಾತ್ರೆಯು ಗಯಾ ಜಿಲ್ಲೆಯ ಬೋಧಗಯಾದಲ್ಲಿ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಆದರೆ ಯಾತ್ರೆಯ ನಾಲ್ಕನೇ ಹಂತ ಪ್ರಾರಂಭವಾಗುವ ನಿಖರವಾದ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.
ಇದನ್ನೂ ಓದಿ: ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯಲಿ: ಪ್ರಧಾನಿ ಅಭ್ಯರ್ಥಿ ರಾಹುಲ್ ಆಗಲಿ ಎಂದ ಬಘೇಲ್