ಹರಿದ್ವಾರ (ಉತ್ತರಾಖಂಡ): ಬಲೂಚಿಸ್ತಾನದ ವಜಾಗೊಂಡ ಪ್ರಾಂತೀಯ ಸರ್ಕಾರದ ಪ್ರಧಾನಿ ಡಾ.ನೈಲಾ ಖಾದ್ರಿ ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳ ಹರಿದ್ವಾರಕ್ಕೆ ಭೇಟಿ ನೀಡಿದರು. ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ. ಪಾಕಿಸ್ತಾನ ಸೇನೆಯ ದುಷ್ಕೃತ್ಯಗಳ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ.
ಜುನಾ ಅಖಾರದ ಮಹಾಮಂಡಲೇಶ್ವರ ಸ್ವಾಮಿ, ಯತಿ ನರಸಿಂಹಾನಂದ ಗಿರಿಯೊಂದಿಗೆ ಹರಿದ್ವಾರದ ವಿಐಪಿ ಘಾಟ್ಗೆ ಡಾ.ನೈಲಾ ಖಾದ್ರಿ ಆಗಮಿಸಿ ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಯಾರೂ ಯೋಚಿಸದ ರೀತಿಯಲ್ಲಿ ಬಲೂಚಿಸ್ತಾನದ ನಾಗರಿಕರನ್ನು ನಡೆಸಿಕೊಳ್ಳಲಾಗುತ್ತಿದೆ. ಪಾಕಿಸ್ತಾನಿ ಸೇನೆ ಮನೆಗಳಿಗೆ ನುಗ್ಗಿ ಅವರನ್ನು ಮಹಿಳೆಯನ್ನು ಎಳೆದುಕೊಂಡು ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಲ್ಲದೇ, ಪಾಕ್ ಸೇನೆ ಯಾವಾಗ ಬೇಕಾದರೂ ಜನರ ಮನೆಗಳಿಗೆ ಮನೆಗಳನ್ನು ಪ್ರವೇಶಿಸುತ್ತದೆ. ಬಲೂಚಿಸ್ತಾನದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತದೆ. ಕುಟುಂಬದ ಮಕ್ಕಳು, ಪುರುಷರ ಮುಂದೆಯೇ ಬಲತ್ಕಾರ ಮಾಡಲಾಗುತ್ತದೆ. ಅವರನ್ನು ಕೊಲೆ ಮಾಡಿ ಮೃತ ದೇಹವನ್ನು ಯಂತ್ರದಿಂದ ಕತ್ತರಿಸಲಾಗುತ್ತಿದೆ. ಅಲ್ಲಿ ನರಮೇಧ ನಡೆಯುತ್ತಿದೆ. ಬಲೂಚಿಸ್ತಾನಿಗಳ ಮನೆಗಳು ಹಾಗೂ ಹೊಲಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಬಲೂಚಿಸ್ತಾನದಲ್ಲಿ ಬಲೂಚ್ ಆಗಿರುವುದೇ ಅಪರಾಧ ಎಂದು ಹೇಳಿದರು.
ಪಾಕಿಸ್ತಾನ ಸೇನೆ ಬಲೂಚಿಸ್ತಾನಿಗಳ ಅಪಹರಿಸಿ, ಅವರ ದೇಹದ ಭಾಗಗಳನ್ನು ತೆಗೆದು ಮಾರಾಟ ಮಾಡಲಾಗುತ್ತದೆ. ಈ ಹಿಂದೆ ಪಾಕಿಸ್ತಾನದ ಆಸ್ಪತ್ರೆಯ ಛಾವಣಿಯಲ್ಲಿ ಸುಮಾರು 500 ಮೃತದೇಹಗಳು ಪತ್ತೆಯಾಗಿರುವುದಕ್ಕೆ ದುಷ್ಕೃತ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಪತ್ತೆಯಾದ ಶವಗಳನ್ನು ಕತ್ತರಿಸಲಾಗಿತ್ತು. ಆದರೆ, ಮೃತದೇಹದಲ್ಲಿ ಅಂಗಾಂಗಗಳು ಇರಲಿಲ್ಲ. ಈ ದುರಂತ ಬೆಳಕಿಗೆ ಬಂದರೂ ಯಾವುದೇ ತನಿಖೆ ನಡೆಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳಿಗೆ ಶಿಕ್ಷಣ ಹೇಳುವ ಶಿಕ್ಷಕಿಯರಿಗೆ ಬೆದರಿಸಲಾಗುತ್ತಿದೆ. ಇದರಿಂದ ಶಿಕ್ಷಕಿಯರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಗಂಗಾ ಮಾತೆಯ ಮೊರೆ ಹೋಗಿದ್ದೇನೆ. ಗಂಗಾ ಮಾತೆ ಎಲ್ಲರ ಪಾಪಗಳನ್ನು ನಾಶ ಮಾಡುತ್ತಾಳೆ. ನಮಗೂ ಸ್ವಾತಂತ್ರ್ಯ ಸಿಗುತ್ತದೆ ಎಂದು ನಾನು ನಂಬಿದ್ದೇನೆ ಎಂದು ಡಾ.ನೈಲಾ ಖಾದ್ರಿ ತಿಳಿಸಿದರು.
ಯತಿ ನರಸಿಂಹಾನಂದ ಗಿರಿ ಮಾತನಾಡಿ, ನೈರಾ ಖಾದ್ರಿ ಅವರು ಬಲೂಚಿಸ್ತಾನಿಗಳು ನೋವಿನ ಕತೆಯನ್ನು ನಮಗೆ ವಿವರಿಸಿದ್ದಾರೆ. ಇದನ್ನು ಕೇಳಿದ ನಂತರ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ನಾವು ಕೂಡ ಗಂಗಾ ಮಾತೆಯನ್ನು ಪ್ರಾರ್ಥಿಸಿದ್ದೇವೆ. ಗಂಗಾ ಮಾತೆ ನೈಲಾ ಖಾದ್ರಿಯ ಪ್ರತಿಯೊಂದು ಆಸೆಯನ್ನು ಈಡೇರಿಸಲಿ ಎಂದು ಹಾರೈಸುತ್ತೇವೆ ಎಂದರು.
ಇದನ್ನೂ ಓದಿ: Pakistan: ಪಾಕಿಸ್ತಾನ ಚುನಾವಣೆ- ಛಿದ್ರವಾದ ಇಮ್ರಾನ್ ಪಕ್ಷ, ಆಡಳಿತಾರೂಢ ಮೈತ್ರಿಕೂಟದ ಹಾದಿ ಸುಗಮ