ಗಾಂಧಿನಗರ(ಗುಜರಾತ್): ಮುಂದಿನ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಆಯ್ಕೆ ಆಗುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ನರೇಂದ್ರ ಭಾಯ್ 20 ವರ್ಷಗಳನ್ನು ಪೂರೈಸಿದ್ದಾರೆ. ಜಗತ್ತಿನಲ್ಲಿ ಯಾವೊಬ್ಬ ನಾಯಕ ನಿರಂತರವಾಗಿ 2 ದಶಕಗಳ ಕಾಲ ಗೆದ್ದ ಸಾಧನೆ ಮಾಡಿಲ್ಲ. ಪ್ರಧಾನಿ ಮೋದಿ ಅವರು ವಿಶ್ರಾಂತಿ ಪಡೆಯದೆ ನಿರಂತರ 20 ವರ್ಷಗಳಿಂದ ಜನ ಸೇವೆ ಮಾಡುತ್ತಿದ್ದಾರೆ ಎಂದು ಶಾ ಅವರು ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.
ಪ್ರಜಾಪ್ರಭುತ್ವ ದೇಶದಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಬದಲಾಯಿಸುತ್ತಿರುತ್ತಾರೆ. ಆದರೆ ಇಷ್ಟೊಂದು ಸುದೀರ್ಘವಾಗಿ ಸೇವೆ ಮಾಡಿದ ಮತ್ತೊಬ್ಬ ನಾಯಕ ಇಲ್ಲ. 2001ರ ಅಕ್ಟೋಬರ್ 7 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಇವರು ದೇಶದ ಪ್ರಧಾನಿಯಾಗಿದ್ದು, ಮುಂದಿನ 2024ರ ಚುನಾವಣೆಯಲ್ಲೂ ಅವರೇ ಮತ್ತೊಮ್ಮೆ ಆಯ್ಕೆ ಆಗುತ್ತಾರೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ, ತಮ್ಮ ಗುಜರಾತ್‌ನ ಲೋಕಸಭಾ ಕ್ಷೇತ್ರವಾದ ಗಾಂಧಿನಗರಕ್ಕೆ ಒಂದು ದಿನದ ಪ್ರವಾಸಕ್ಕಾಗಿ ನಿನ್ನೆ ಭೇಟಿ ನೀಡಿದ್ದರು. ಸ್ವಾವಲಂಬಿ ಜೀವನಕ್ಕಾಗಿ ಗಾಂಧಿನಗರದ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರು ಆರಂಭಿಸಿರುವ ಟೀ ಅಂಗಡಿಯನ್ನು ಅಮಿತ್ ಶಾ ಉದ್ಘಾಟಿಸಿದರು.