ನವದೆಹಲಿ: 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದ ಹೊಸ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅನೇಕ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜನತಾ ಕರ್ಫ್ಯೂ, ಜೇನುಕೃಷಿ, ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಸಾಧನೆ ಸೇರಿದಂತೆ ಅನೇಕ ವ್ಯಕ್ತಿಗಳು ಮತ್ತು ವಿಚಾರಗಳ ಬಗ್ಗೆ ಅವರು ಮಾತನಾಡಿದರು.
ಪ್ರಮುಖ ಅಂಶಗಳು:
- ಹಕ್ಕಿಗಳ ಮಹತ್ವ: ಕೆಲವು ದಿನಗಳ ಹಿಂದೆ ನಾವು ವಿಶ್ವಗುಬ್ಬಿ ದಿನವನ್ನು ಆಚರಣೆ ಮಾಡಿದೆವು. ಹಲವು ವರ್ಷಗಳ ಹಿಂದೆ ಗುಬ್ಬಿಗಳು ಕಾಣುತ್ತಿದ್ದವು. ಈಗ ಅವುಗಳನ್ನು ಸಂರಕ್ಷಣೆ ಮಾಡಬೇಕಿದೆ. ಬನಾರಸ್‌ನಲ್ಲಿ ಗುಬ್ಬಿಗಳ ವಾಸಕ್ಕಾಗಿಯೇ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೊದಲು ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದವು. ಆದರೆ, ಇತ್ತೀಚಿಗೆ ಹಕ್ಕಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಹಕ್ಕಿಗಳು ನಮ್ಮ ಪರಿಸರದ ಪಾವಿತ್ರತೆಯ ಸಂಕೇತ. ಅವುಗಳನ್ನು ಸಂರಕ್ಷಿಸಬೇಕು ಎಂದು ಕರೆ ನೀಡಿದರು.
- ಜೇನು ಕೃಷಿ: ಆದಾಯವನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ರೈತರು ಸಾಂಪ್ರದಾಯಿಕ ಕೃಷಿಯ ಜೊತೆಗೆ ನಾವೀನ್ಯ ತಂತ್ರಗಾರಿಕೆಗಳನ್ನು ಆಳವಡಿಸಿಕೊಳ್ಳಬೇಕು. ಭಾರತದಲ್ಲಿ ಉತ್ಪಾದನೆಯಾಗುವ ಜೇನಿಗೆ ವಿದೇಶಗಳಲ್ಲಿ ಉತ್ತಮ ಬೆಲೆಯಿದೆ. ಜೇನುಕೃಷಿಯ ಮೂಲಕ ಆತ್ಮನಿರ್ಭರ ಭಾರತವನ್ನು ಯಶಸ್ವಿಗೊಳಿಸಬಹುದು. ಈ ಅವಕಾಶವನ್ನು ದೇಶದ ಕೃಷಿಕರು ಸದುಪಯೋಗಪಡಿಸಿಕೊಳ್ಳಬೇಕು. ಗುಜರಾತ್‌ನಲ್ಲಿ ಬನಾಸ್ಕಟ್ ನಲ್ಲಿ ಜೇನು ಸಾಕಣೆಯಿಂದಲೇ ಸಾವಿರಾರು ರೂಪಾಯಿ ಆದಾಯವನ್ನು ಗಳಿಸುತ್ತಿದ್ದಾರೆ. ಅನೇಕ ರೈತರು ಈಗ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಾರ್ಜಿಲಿಂಗ್‌ನ ಗುರ್ದುಮ್ ಗ್ರಾಮದ ಜನರು ಜೇನುನೊಣಗಳ ಸಾಕಾಣಿಕೆಯನ್ನು ಕೈಗೆತ್ತಿಕೊಂಡಿದ್ದು, ಅವರು ತಯಾರಿಸಿದ ಜೇನುತುಪ್ಪಕ್ಕೆ ಉತ್ತಮ ಬೇಡಿಕೆಯಿದೆ. ಇದರಿಂದ ಅವರ ಆದಾಯವು ಹೆಚ್ಚಾಗಿದೆ ಎಂದು ತಿಳಿಸಿದರು.
- ಮಿಥಾಲಿ ರಾಜ್‌ಗೆ ಅಭಿನಂದನೆ: ಮಾರ್ಚ್ ತಿಂಗಳಿನಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಸಾಕಷ್ಟು ಮಹಿಳಾ ಸ್ಪರ್ಧಿಗಳು ತಮ್ಮ ಹೆಸರಿನಲ್ಲಿ ದಾಖಲೆ ಮತ್ತು ಪದಕಗಳನ್ನು ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿ ಆಯೋಜಿಸಿದ್ದ ಐಎಸ್ಎಸ್ಎಫ್ ವರ್ಲ್ಡ್ ಕಪ್ ಶೂಟಿಂಗ್ ನಲ್ಲಿ ಭಾರತ ಉನ್ನತ ಸ್ಥಾನವನ್ನು ಪಡೆದುಕೊಂಡಿತ್ತು. ಇಟಲಿಯಲ್ಲೂ ಕೂಡ ಚಿನ್ನದ ಪದಕದಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿತ್ತು. ಪಿ ವಿ ಸಿಂಧು ಮತ್ತು ಬಿಡಬ್ಲ್ಯೂಎಫ್ ಸ್ವಿಸ್ ಓಪನ್ ಸೂಪರ್ 300 ಟೂರ್ನಮೆಂಟ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಮಿಥಾಲಿ ರಾಜ್‌ಗೆ ಅಭಿನಂದನೆ ಸಲ್ಲಿಸಿದರು. ಮಿಥಾಲಿ ರಾಜ್ ಅವರ ಕಠಿಣ ಶ್ರಮ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಪ್ರೇರಣೆ ಎಂದು ಹೇಳಿದರು.
- ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ: ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅನೇಕ ಕಷ್ಟಗಳನ್ನು ಅನುಭವಿಸಿದ್ದರು. ದೇಶದ ಹಿತಕ್ಕಾಗಿ ತ್ಯಾಗ ಮಾಡುವುದು ತಮ್ಮ ಕರ್ತವ್ಯ ಎಂದು ಪರಿಗಣಿಸಿದ್ದರು. ಅವರ ತ್ಯಾಗ ಮತ್ತು ಬಲಿದಾನ ನಮ್ಮ ಕರ್ತವ್ಯದ ಹಾದಿಗೆ ನಿರಂತರವಾಗಿ ಪ್ರೇರೇಪಿಸಲಿದೆ. ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ದೇಶದಾದ್ಯಂತ ನಡೆಯಲಿವೆ. ಸ್ವಾತಂತ್ರ್ಯ ಹೋರಾಟಗಾರರ ಸಾಹಸವಿರಲಿ, ಸ್ಥಳದ ಇತಿಹಾಸವೇ ಇರಲಿ ಅಥವಾ ದೇಶದ ಯಾವುದೇ ಸಾಂಸ್ಕೃತಿಕತೆ ಇರಲಿ, ಅದನ್ನು ಅಮೃತ ಮಹೋತ್ಸವ ವೇಳೆ ಮುನ್ನೆಲೆಗೆ ತರಬೇಕು ಮತ್ತು ಅದು ದೇಶದ ಪ್ರತಿ ನಾಗರಿಕರ ಸಂಪರ್ಕಕ್ಕೆ ಬರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
- ಕೊಯಮತ್ತೂರಿನ ಬಸ್ ಕಂಡಕ್ಟರ್ ಕಾರ್ಯಕ್ಕೆ ಶ್ಲಾಘನೆ: ತಮಿಳುನಾಡಿನ ಕೊಯಮತ್ತೂರಿನ ಬಸ್ ಕಂಡಕ್ಟರ್ ಮಾರಿಮುತ್ತು ಯೋಗನಾಥನ್ ಅವರು ಟಿಕೆಟ್ ಜೊತೆಗೆ ಪ್ರಯಾಣಿಕರಿಗೆ ಉಚಿತ ಸಸಿಗಳನ್ನು ನೀಡುತ್ತಾರೆ. ಇದಕ್ಕಾಗಿ ಅವರು ತಮ್ಮ ಆದಾಯದ ಹೆಚ್ಚಿನ ಆದಾಯವನ್ನು ಖರ್ಚು ಮಾಡುತ್ತಾರೆ. ಈ ಮೂಲಕ ಪರಿಸರ ರಕ್ಷಣೆಗೆ ಕೊಡುಗೆ ನೀಡುತ್ತಿದ್ದಾರೆ. ಅವರ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು ಎಂದರು.
- ವಿಶ್ವದಲ್ಲಿಯೇ ಅತಿದೊಡ್ಡ ಕೋವಿಡ್ ಲಸಿಕಾ ಅಭಿಯಾನ: ವಿಶ್ವದಲ್ಲಿಯೇ ಅತಿದೊಡ್ಡ ಕೋವಿಡ್ ಲಸಿಕಾ ಅಭಿಯಾನವನ್ನು ನಡೆಸುತ್ತಿರುವ ಬಗ್ಗೆ ನಮಗೆ ಹೆಮ್ಮೆ ಇದೆ. ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಉತ್ತರ ಪ್ರದೇಶದ ಜಣನ್ಪುರದಲ್ಲಿ 109 ವರ್ಷದ ವೃದ್ಧ ಮಹಿಳೆ ಸ್ವತಃ ಲಸಿಕೆ ಪಡೆದುಕೊಂಡಿದ್ದಾರೆ. ಅದೇ ರೀತಿ ದೆಹಲಿಯಲ್ಲಿ 107 ವರ್ಷದ ವ್ಯಕ್ತಿಯು ಕೂಡ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗಾಗಿ ಲಸಿಕೆ ಪಡೆಯುವಂತೆ ಜನರಿಗೆ ಅರಿವು ಮೂಡಿಸಬೇಕು. ವ್ಯಾಕ್ಸಿನ್ ಸೇವಾ ಎಂಬಂತಹ ಟ್ಯಾಗ್ ಮಾಡಿಯೂ ಬಹಳಷ್ಟು ಜನರು ತಮ್ಮ ಮನೆಯ ಹಿರಿಯರು ವ್ಯಾಕ್ಸಿನ್ ಪಡೆಯುವ ಫೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ನಾನು ಈ ಫೋಟೋಗಳನ್ನು ಟ್ವಿಟರ್‌ಗಳಲ್ಲಿ ನೋಡುತ್ತಿದ್ದೇನೆ ಎಂದು ಹೇಳಿದರು.
- ಕೇಳುಗರಿಗೆ ಧನ್ಯವಾದ ಅರ್ಪಿಸಿದ ಮೋದಿ: ದೇಶದ ಮೂಲೆ ಮೂಲೆಯ ಜನರ ಜೊತೆ ನಾವು ಮನ್ ಕಿ ಬಾತ್ ಮೂಲಕ ಮಾತನಾಡಿದ್ದೇವೆ. ಇಂದು 75ನೇ ಆವೃತ್ತಿಯ ಕಾರ್ಯಕ್ರಮವಾಗಿದೆ. ಇದಕ್ಕಾಗಿ ಹಲವಾರು ಜನರು ನನಗೆ ಅಭಿನಂದನೆ ಸಲ್ಲಿಸಿದ್ದಾರೆ. ನನ್ನ ಈ ವಿಚಾರ ಯಾತ್ರೆಯಲ್ಲಿ ಹಲವಾರು ಜನರು ಪಾಲ್ಗೊಂಡಿದ್ದಾರೆ. ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ಎಲ್ಲಾ ಕೇಳುಗರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.
- ಚೆನ್ನೈ ಲೈಟ್ ಹೌಸ್: ಚೆನ್ನೈ ಲೈಟ್ ಹೌಸ್ ಬಗ್ಗೆ ಗುರುಪ್ರಸಾದ್ ಅವರು ವಿಸ್ತಾರವಾದ ವಿವರಗಳನ್ನು ನೀಡಿದ್ದಾರೆ. ಲೈಟ್ ಹೌಸ್ ಕಾರ್ಯ ನಿರ್ವಹಣೆ, ಅಲ್ಲಿರುವ ಮ್ಯೂಸಿಯಂ ಬಗ್ಗೆಯೂ ಮಾಹಿತಿಗಳನ್ನು ನೀಡಿದ್ದಾರೆ. ಇದು ಪ್ರವಾಸೋದ್ಯಮ ಕೇಂದ್ರವಾಗಿದೆ. ಗುಜರಾತ್‌ನ ಜಿಂಜೋರಾದಲ್ಲಿ ಒಂದು ಲೈಟ್ ಹೌಸ್ ಇದೆ. ಈ ಲೈಟ್ ಹೌಸ್‌ನಿಂದ ಸಮುದ್ರ 100 ಕಿ. ಮೀ. ದೂರದಲ್ಲಿದೆ. 2004ರಲ್ಲಿ ಭಾರತದಲ್ಲಿ ಸುನಾಮಿ ಬಂದಾಗ ನಾವು ಲೈಟ್ ಹೌಸ್ ನಲ್ಲಿ ಕೆಲಸ ಮಾಡುವ 14 ಕಾರ್ಮಿಕರನ್ನು ಕಳೆದುಕೊಂಡಿದ್ದೇವೆ.
- ಹೋಳಿ ಮತ್ತು ಈಸ್ಟರ್ ಹಬ್ಬಕ್ಕೆ ಶುಭಾಶಯ: ಹೋಳಿ ಮತ್ತು ಈಸ್ಟರ್ ಹಬ್ಬದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ, ಕೆಲ ದಿನಗಳಲ್ಲೇ ಆಚರಿಸಲ್ಪಡುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆಗೂ ಶುಭಕೋರಿದರು. ಅಲ್ಲದೇ ಅಂಬೇಡ್ಕರ್ ಜೀವನಾದರ್ಶಗಳನ್ನು ಅಳವಡಿಸಿಕೊಂಡು ಅವರ ಜನ್ಮದಿನ ಆಚರಿಸೋಣ ಎಂದು ಕರೆ ನೀಡಿದರು.