ಭೋಪಾಲ್ : ಇಲ್ಲಿನ ವಯೋವೃದ್ಧೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ತನ್ನ ಸ್ವಂತ ಮಗ ಎಂದು ಭಾವಿಸಿಕೊಂಡಿದ್ದಾರೆ. ಆದರೆ ಇವರ ಪುತ್ರಪ್ರೀತಿ ಇಷ್ಟಕ್ಕೇ ಸೀಮಿತವಾಗಿಲ್ಲ, ತನ್ನ ಆಸ್ತಿಯನ್ನು ಮೋದಿಯವರ ಹೆಸರಿಗೆ ಬರೆಯುವುದು ಕೂಡ ಇವರ ಇಚ್ಛೆಯಾಗಿದೆ. ಮಧ್ಯಪ್ರದೇಶದ ರಾಜಗಢ ನಿವಾಸಿಯಾಗಿರುವ 100 ವರ್ಷದ ವೃದ್ಧೆ ಮಾಂಗಿ ಬಾಯಿ ತಂವರ್ ತನ್ನ 25 ಬಿಘಾ ಜಮೀನನ್ನು ಪ್ರಧಾನಿ ಮೋದಿ ಹೆಸರಿಗೆ ಬರೆಯಲು ತಯಾರಾಗಿರುವುದು ಅಚ್ಚರಿ ಮೂಡಿಸಿದೆ.
ಸಾಯುವ ಮುನ್ನ ಒಂದು ಬಾರಿ ನರೇಂದ್ರ ಮೋದಿಯವರನ್ನು ಭೇಟಿಯಾಗುವುದು ಈಕೆಯ ಮಹದಾಸೆಯಾಗಿದೆ. ಮೋದಿಯವರ ಬಗ್ಗೆ ವೃದ್ಧೆ ಹೇಳುವ ಮಾತುಗಳು ಹೀಗಿವೆ: "ಮೋದಿಜಿ ನನ್ನ ಮಗ. ಮೋದಿಯವರೇ ನನಗೆ ಮನೆ ನೀಡಿದ್ದಾರೆ, ನನಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಧಾನ್ಯ ಖರೀದಿಸಲು ಹಣ ಕೂಡ ನೀಡುತ್ತಿದ್ದಾರೆ. ಮೋದಿಯವರ ಸಹಾಯದಿಂದಲೇ ನಾನು ತೀರ್ಥಯಾತ್ರೆ ಮಾಡಿದ್ದೇನೆ" ಎನ್ನುತ್ತಾರೆ ಮಹಿಳೆ. ಈ ಮಾತುಗಳನ್ನಾಡಿರುವ ವೃದ್ಧೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
100 ವರ್ಷ ಪೂರೈಸುತ್ತಿರುವ ವಯೋವೃದ್ಧ ಮಾಂಗಿ ಬಾಯಿ, ರಾಜ್‌ಗಢ್ ಜಿಲ್ಲಾ ಕೇಂದ್ರದಿಂದ 65 ಕಿಮೀ ದೂರದಲ್ಲಿರುವ ಹರಿಪುರ ಜಾಗೀರ್ ಗ್ರಾಮದ ನಿವಾಸಿ. ಮಾಂಗಿ ಬಾಯಿಗೆ 14 ಮಕ್ಕಳಿದ್ದಾರೆ. ಆದರೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಕೆ ತನ್ನ ಮಗ ಕೇವಲ ಪ್ರಧಾನಿ ಮೋದಿ ಎಂದು ಹೇಳುತ್ತಿರುವುದು ಕಾಣಿಸುತ್ತದೆ. ಮಾಂಗಿ ಬಾಯಿ ಅವರು ಇಲ್ಲಿಯವರೆಗೆ ಪ್ರಧಾನಿ ಮೋದಿಯನ್ನು ಟಿವಿಯಲ್ಲಿ ಮಾತ್ರ ನೋಡಿದ್ದಾರೆ. ಜೀವನದಲ್ಲಿ ಒಂದು ಬಾರಿ ನಿಜವಾಗಿಯೂ ಅವರನ್ನು ಭೇಟಿಯಾಗಲು ಬಯಸುತ್ತಿದ್ದಾರೆ. ತನಗೆ ವಿಧವಾ ಪಿಂಚಣಿ ಕೊಟ್ಟವರು, ಜೀವನೋಪಾಯಕ್ಕೆ ಅನುಕೂಲ ಮಾಡಿ ಕೊಟ್ಟಿದ್ದು ನರೇಂದ್ರ ಮೋದಿ ಎಂಬುದು ಆಕೆಯ ನಿಲುವಾಗಿದೆ.
5 ಹೊಸ ವಂದೇ ಭಾರತ್ ರೈಲಿಗೆ ನಾಳೆ ಚಾಲನೆ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ಐದು ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಮಧ್ಯಪ್ರದೇಶದಲ್ಲಿ ಎರಡು ರೈಲು, ಕರ್ನಾಟಕದಲ್ಲಿ ಒಂದು, ಬಿಹಾರದಲ್ಲಿ ಒಂದು ರೈಲು ಆರಂಭವಾಗಲಿವೆ. ಗೋವಾದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಕೂಡ ಇದೇ ಸಮಯದಲ್ಲಿ ಚಾಲನೆ ನೀಡಲಾಗುವುದು.
ಸೆಮಿ-ಹೈ ಸ್ಪೀಡ್ ರೈಲುಗಳು ಕಾರ್ಯನಿರ್ವಹಿಸುವ ಐದು ಹೊಸ ಮಾರ್ಗಗಳೆಂದರೆ- ರಾಣಿ ಕಮಲಾಪತಿ (ಭೋಪಾಲ್)-ಜಬಲ್ಪುರ ವಂದೇ ಭಾರತ್ ಎಕ್ಸ್‌ಪ್ರೆಸ್; ಖಜುರಾಹೊ-ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್; ಮಡಗಾಂವ್ (ಗೋವಾ)-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್; ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್; ಮತ್ತು ಹಟಿಯಾ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್. ಇದರೊಂದಿಗೆ ಭಾರತದಲ್ಲಿ ಸೆಮಿ ಹೈ ಸ್ಪೀಡ್ ನೀಲಿ ಬಿಳಿ ರೈಲುಗಳ ಒಟ್ಟು ಸಂಖ್ಯೆ 23 ಕ್ಕೆ ತಲುಪಲಿದೆ.
ಇದನ್ನೂ ಓದಿ : Sex education: ಸಹೋದರನಿಂದಲೇ ಗರ್ಭಿಣಿಯಾದ ಅಪ್ರಾಪ್ತೆ: ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಸೇರಿಸಿ ಎಂದ ಕೇರಳ ಹೈಕೋರ್ಟ್