ಮುಂಬೈ: ರಾಷ್ಟ್ರಪತಿ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ಚರ್ಚಿಸಲು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಎಲ್ಲಾ ಸಂಸದರ ಸಭೆ ಕರೆದಿದ್ದರು.
ಶಿವಸೇನೆಯ 19 ಸಂಸದರ ಪೈಕಿ 15 ಮಂದಿ ಹಾಜರಾಗಿದ್ದು, 4 ಮಂದಿ ಗೈರು ಹಾಜರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ತಮ್ಮ ನಿಲುವು ಏನು ಎಂಬ ಬಗ್ಗೆ ಘೋಷಿಸುವುದಾಗಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಬೇಕು ಎಂದು ಈ ವೇಳೆ ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿನ್ಹಾಗೆ ಮತ ಹಾಕುವಂತೆ ರಾವುತ್ ಸಲಹೆ: ಯುಪಿಎ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಮತ ಹಾಕುವಂತೆ ಶಿವಸೇನೆ ಸಂಸದ ಸಂಜಯ್ ರಾವುತ್ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಿವಸೇನೆಯು ಲೋಕಸಭೆಯಲ್ಲಿ 19 ಮತ್ತು ರಾಜ್ಯಸಭೆಯಲ್ಲಿ ಮೂವರು ಸಂಸದರನ್ನು ಹೊಂದಿದೆ.
ಬಹುತೇಕ ಸಂಸದರ ಬೆಂಬಲ ಮುರ್ಮ್ಗೆ: ಬಹುತೇಕ ಸಂಸದರು ಎನ್ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕು ಎಂಬ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ದವ್ ಠಾಕ್ರೆ ಕೈಗೊಳ್ಳುವ ತೀರ್ಮಾನ ಕುತೂಹಲ ಕೆರಳಿಸಿದೆ. ಈಗಾಗಲೇ 40 ಶಾಸಕರು ಬಂಡಾಯ ಎದ್ದು ಹೊಸ ಸರ್ಕಾರ ರಚನೆ ಮಾಡಿದ್ದಾರೆ.
ಕೋರ್ಟ್ನಲ್ಲಿ ಅನರ್ಹತೆ ವಿಚಾರದ ವಿಚಾರಣೆ: ಅನರ್ಹತೆ ಸಂಬಂಧದ ವಿವಾದ ಇನ್ನೂ ಸುಪ್ರೀಂಕೋರ್ಟ್ನಲ್ಲಿದೆ. ಉದ್ದವ್ ಬಣದ 15 ಶಾಸಕರ ಅನರ್ಹತೆ ಮಾಡದಂತೆ ಠಾಕ್ರೆ ಬಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಇಂದು ಮೂರು ಅರ್ಜಿಗಳ ವಿಚಾರಣೆ ನಡೆದು ಅಂತಿಮ ತೀರ್ಪು ಹೊರ ಬರುವವರೆಗೂ ಸ್ಪೀಕರ್ ಅನರ್ಹತೆ ಬಗ್ಗೆ ಯಾವುದೇ ತೀರ್ಮಾನ ಮಾಡುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದೆ.
ಈ ನಡುವೆ 14ಕ್ಕೂ ಹೆಚ್ಚು ಸಂಸದರು ಬಂಡಾಯ ಏಳುವ ಸಾಧ್ಯತೆ ಇದೆ ಎಂಬ ಗುಸು ಗುಸು ಇದೆ. ಈ ಕಾರಣದಿಂದಾಗಿ ಸಂಸದರ ಸಭೆ ಕರೆದಿರುವ ಮಾಜಿ ಸಿಎಂ ಠಾಕ್ರೆ, ಚರ್ಚೆ ನಡೆಸಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದಿರುವ ಅವರು, ಇನ್ನೆರಡು ದಿನಗಳಲ್ಲಿ ತೀರ್ಮಾನ ಮಾಡಲಿದ್ದಾರೆ.
ಇದನ್ನೂ ಓದಿ:ಒಂಟಿ ತಾಯಿಯ ಮಗಳೆಂದು ಶಾಲೆಗೆ ಸೇರಿಸಿಕೊಳ್ಳಲು ನಿರಾಕರಿಸಿದ ಶಾಲೆ: ಮಹಿಳೆಯ ಗಂಭೀರ ಆರೋಪ