ನವ ದೆಹಲಿ: ಭಾರತದ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು 2021ರ ಹೊಸ ವರ್ಷದ ಮುನ್ನಾದಿನದಂದು ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
"ಹೊಸ ವರ್ಷದ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ನಮ್ಮ ಎಲ್ಲ ಸಹ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ" ಎಂದು ರಾಮ್ನಾಥ್ ಕೋವಿಂದ್ ಹೇಳಿದ್ದಾರೆ.
ಪ್ರತಿ ಹೊಸ ವರ್ಷವು ಹೊಸ ಆರಂಭವನ್ನು ಮಾಡಲು ಅವಕಾಶ ಒದಗಿಸುತ್ತದೆ ಮತ್ತು ವೈಯಕ್ತಿಕ ಮತ್ತು ಸಾಮೂಹಿಕ ಅಭಿವೃದ್ಧಿಗೆ ನಮ್ಮ ಸಂಕಲ್ಪವನ್ನು ಒತ್ತಿಹೇಳುತ್ತದೆ. ಕೋವಿಡ್-19 ಪರಿಸ್ಥಿತಿಯಿಂದ ಉದ್ಭವಿಸಿರುವ ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಮುಂದುವರಿಯುಬೇಕಿದೆ. ವೈವಿಧ್ಯತೆಯಲ್ಲಿ ಏಕತೆ ನಮ್ಮ ನಂಬಿಕೆಯನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುವ ಸಮಯ ಇದು ಎಂದು ಅವರು ತಿಳಿಸಿದ್ದಾರೆ.
ಶಾಂತಿ ಮತ್ತು ಸದ್ಭಾವನೆ ಉತ್ತೇಜಿಸುವ ಪ್ರೀತಿ, ಸಹಾನುಭೂತಿ ಮತ್ತು ಸಹಿಷ್ಣುತೆಯ ಮನೋಭಾವದಿಂದ ಕೂಡಿದ ಅಂತರ್ಗತ ಸಮಾಜವನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡೋಣ. ನೀವೆಲ್ಲರೂ ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿ. ನಮ್ಮ ರಾಷ್ಟ್ರದ ಪ್ರಗತಿಯ ಗುರಿ ಸಾಧಿಸಲು ಹೊಸ ಶಕ್ತಿಯೊಂದಿಗೆ ಮುಂದುವರಿಯಿರಿ" ಎಂದು ಅವರು ಆಶಿಸಿದ್ದಾರೆ.