ನವದೆಹಲಿ : ಎದೆ ನೋವಿನ ಕಾರಣದಿಂದಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾರ್ಚ್.30ರಂದು ಬೈಪಾಸ್ ಸರ್ಜರಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ರಾಷ್ಟ್ರಪತಿ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ರಾಷ್ಟ್ರಪತಿ ಭವನ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಇದಲ್ಲದೆ ಹೋಳಿ ಹಬ್ಬದ ಪ್ರಯುಕ್ತ ನಾಡಿನ ಜನತೆಗೆ ರಾಷ್ಟ್ರಪತಿ ಸಂದೇಶ ರವಾನಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
ಹೋಳಿಯ ಶುಭ ಸಂದರ್ಭದಲ್ಲಿ ಭಾರತ ಮತ್ತು ವಿದೇಶದಲ್ಲಿರುವ ಎಲ್ಲ ನಾಗರಿಕರಿಗೆ ನನ್ನ ಶುಭಾಶಯಗಳನ್ನು ಅರ್ಪಿಸುತ್ತೇನೆ. ಹೋಳಿ, ಬಣ್ಣಗಳ ಹಬ್ಬವು ವಸಂತ ಖುತುವಿನ ಪ್ರಮುಖ ಹಬ್ಬವಾಗಿದೆ. ಇದು ಸಾಮಾಜಿಕ ಸಾಮರಸ್ಯದ ಹಬ್ಬವಾಗಿದ್ದು, ಜನರ ಜೀವನದಲ್ಲಿ ಸುಖ-ಸಂತೋಷ ತರಲಿದೆ.
ಇದು ನಮಗೆ ಸಮಾನತೆ ಮತ್ತು ಭ್ರಾತೃತ್ವದ ಸಂದೇಶ ನೀಡುತ್ತದೆ. ಅದೇ ಸಮಯದಲ್ಲಿ ಸೌಹಾರ್ದತೆ, ಏಕತೆ ಮತ್ತು ಸಾಮರಸ್ಯದ ಅಡಿಪಾಯದ ಮೇಲೆ ನಿರ್ಮಿಸಲಾಗಿರುವ ಹೊಸ ಭಾರತ ನಿರ್ಮಿಸಲು ಜನ ಒಗ್ಗೂಡಲು ಇದು ಪ್ರೇರಣೆ ನೀಡುತ್ತದೆ. ಈ ಉತ್ಸಾಹದ ಹಬ್ಬವು ನಮ್ಮ ಸಾಂಸ್ಕೃತಿಕ ವೈವಿಧ್ಯತೆಗೆ ಅವಿಭಾಜ್ಯವಾಗಿರುವ ರಾಷ್ಟ್ರೀಯತೆಯ ಮನೋಭಾವವನ್ನು ಮತ್ತಷ್ಟು ಬಲಪಡಿಸಲಿ ಎಂಬ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಬಾಂಗ್ಲಾದೇಶ ಭೇಟಿ ನೀತಿ ಸಂಹಿತೆ ಉಲ್ಲಂಘನೆ: ಮೋದಿ ವೀಸಾ ರದ್ದತಿಗೆ ಮಮತಾ ಆಗ್ರಹ