ಶಿಮ್ಲಾ (ಹಿಮಾಚಲ ಪ್ರದೇಶ): ಗಾಜಿನ ಬಳೆ, ಮೇಣದ ಬಳೆ, ಪ್ಲಾಸ್ಟಿಕ್ ಬಳೆಗಳು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ, ಹಿಮಾಚಲ ಪ್ರದೇಶದಲ್ಲಿ ಕುದುರೆಯ ಕೂದಲಿನಿಂದ ಬಳೆ ತಯಾರಿಸಲಾಗುತ್ತದೆ. ಈ ಬಳೆಗಳು ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆ.
ಕುದುರೆ ಕೂದಲಿನಿಂದ ಬಳೆಗಳನ್ನು ತಯಾರಿಸುವ ಈ ಕಲೆ ತುಂಬಾ ಹಳೆಯದು. ಚಂಬಾ ಜಿಲ್ಲೆಯ ಚರಪತ್ ಮೊಹಲ್ಲಾದ ಸ್ವರ್ಣ ದೇವಿ 30 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ಸ್ವರ್ಣ ದೇವಿ ಈ ಕೆಲಸವನ್ನು ತಾಯಿಯಿಂದ ಕಲಿತರು ಮತ್ತು ತಾಯಿ ಅದನ್ನು ಅವರ ತಾಯಿಯಿಂದ ಕಲಿತಿದ್ದರಂತೆ.
ಕುದುರೆ ಕೂದಲಿಂದ ಬಳೆಗಳನ್ನು ಮಾಡುವುದು ಸುಲಭದ ಮಾತಲ್ಲ. ಎಲ್ಲ ಕುದುರೆಗಳ ಕೂದಲಿನಿಂದ ಬಳೆಗಳ ತಯಾರಿ ಸಾಧ್ಯವಿಲ್ಲವಂತೆ. ಹೀಗಾಗಿ, ಬಳೆ ತಯಾರಿಕೆಗೆ ಒಂದೂವರೆಯಿಂದ 2 ಅಡಿ ಉದ್ದದ ಕೂದಲು ಅವಶ್ಯವಿದೆ.
ಇದರ ಜೊತೆ ಉತ್ತಮ ಬಿದಿರಿನ ಅಗತ್ಯತೆಯೂ ಇದೆ. ಮೊದಲು ಬಿದಿರಿನ ತುಂಡುಗಳನ್ನು ಸಣ್ಣದಾಗಿ ಕತ್ತರಿಸಲಾಗುತ್ತದೆ. ನಂತರ ವೃತ್ತಾಕಾರವಾಗಿ ಮಾಡಿಕೊಂಡು ಅದರ ಮೇಲೆ ವಿವಿಧ ಬಣ್ಣದ ಕುದುರೆ ಕೂದಲಲ್ಲಿ ಕಲಾಕೃತಿ ರಚಿಸಲಾಗುತ್ತದೆ.
ಈ ರೀತಿಯ ಕಲೆಯಲ್ಲಿ ಪರಿಣಿತಿ ಪಡೆದಿರುವ ಸ್ವರ್ಣದೇವಿ ಈ ಕಲೆಯನ್ನ ತನ್ನ ಮೊಮ್ಮಕ್ಕಳಿಗೂ ಹೇಳಿಕೊಡುತ್ತಿದ್ದಾರೆ. ಮಕ್ಕಳೂ ಆಸಕ್ತಿಯಿಂದ ಕಲಿತು ಮುಂದಿನ ತಲೆಮಾರಿಗೂ ಕಲೆ ಉಳಿಸುವ ಕನಸು ಕಾಣುತ್ತಿದ್ದಾರೆ.
1985ರಲ್ಲಿ ಈ ಕಲೆಯನ್ನು ಉಳಿಸಲೆಂದು ಸರ್ಕಾರ ತರಬೇತಿ ಸಂಸ್ಥೆಯೊಂದನ್ನ ತೆರೆಯಿತು. ಆದರೆ, ಕೆಲ ಕಾಲದಲ್ಲಿ ಅದನ್ನು ಮುಚ್ಚಲಾಯಿತು. ಬಳಿಕ ಕಚ್ಚಾ ವಸ್ತುಗಳು ದುಬಾರಿಯಾಗಿದ್ದರಿಂದ ಈ ಕೆಲಸದಲ್ಲಿ ತೊಂದರೆ ಎದುರಾಯಿತು. ಸರ್ಕಾರ ನಮ್ಮ ಕಡೆ ಗಮನಹರಿಸಿದರೆ ಇನ್ನಷ್ಟು ಮಂದಿಗೆ ಕಲಿಸುತ್ತೇವೆ ಎನ್ನುತ್ತಾರೆ ಸ್ವರ್ಣ ದೇವಿ.
ನಮ್ಮ ದೇಶದ ಅತಿದೊಡ್ಡ ಸಂಪತ್ತು ನಮ್ಮ ಸಂಸ್ಕೃತಿ. ಹಿಮಾಚಲದಲ್ಲಿ ಇಂತಹ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈ ಸಂಸ್ಕೃತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಸರ್ಕಾರ ಇದರತ್ತ ಗಮನ ಹರಿಸಿದರೆ ಸ್ವರ್ಣ ದೇವಿಯಂತಹ ಕಲಾವಿದರು ಇನ್ನಷ್ಟು ಮಂದಿ ನಮ್ಮ ಸಂಸ್ಕೃತಿಯ ರಕ್ಷಕರಾಗುತ್ತಾರೆ.