ಥಾಣೆ(ಮಹಾರಾಷ್ಟ್ರ): ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯಾತಪ್ಪಿ ಕೆಳೆಗೆ ಬಿದ್ದ ಗರ್ಭಿಣಿಯೊಬ್ಬರ ರಕ್ಷಣೆ ಮಾಡುವಲ್ಲಿ ಆರ್ಪಿಎಫ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮಹಾರಾಷ್ಟ್ರದ ಥಾಣೆಯ ಕಲ್ಯಾಣ್ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಈ ಘಟನೆ ನಡೆದಿದೆ. ಚಂದ್ರೇಶ್ ಎಂಬ ಪ್ರಯಾಣಿಕ ಚಿಕ್ಕ ಮಗಳು ಹಾಗೂ 8 ತಿಂಗಳ ಗರ್ಭಿಣಿ ಹೆಂಡತಿ ಜೊತೆ ಗೋರಖ್ಪುರ್ ಎಕ್ಸ್ಪ್ರೆಸ್ಗಾಗಿ ಕಾಯುತ್ತಿದ್ದರು. ಪ್ಲಾಟ್ಫಾರ್ಮ್ನಲ್ಲಿ ಬೇರೆ ರೈಲು ಬಂದು ನಿಲ್ಲುತ್ತಿದ್ದಂತೆ ಅದೇ ಗೋರಖ್ಪುರ್ ಎಕ್ಸ್ಪ್ರೆಸ್ ಎಂದು ರೈಲು ಹತ್ತಿದ್ದಾರೆ. ಅದು ಗೋರಖ್ಪುರ್ ಎಕ್ಸ್ಪ್ರೆಸ್ ಅಲ್ಲ ಎಂದು ತಿಳಿದ ತಕ್ಷಣವೇ ಚಲಿಸುತ್ತಿದ್ದ ರೈಲಿನಿಂದ ಇಳಿಯುವ ಪ್ರಯತ್ನ ಮಾಡಿದ್ದಾರೆ. ಚಂದ್ರೇಶ್ ರೈಲಿನಿಂದ ಇಳಿದಿದ್ದಾರೆ.
ಆದರೆ, ಆತನ 8 ತಿಂಗಳ ಗರ್ಭಿಣಿ ಪತ್ನಿ ಇಳಿಯುವ ಭರದಲ್ಲಿ ಪ್ಲಾಟ್ಫಾರ್ಮ್ ಮೇಲೆ ಬಿದ್ದಿದ್ದಾಳೆ. ಈ ವೇಳೆ, ಕರ್ತವ್ಯದಲ್ಲಿದ್ದ ಆರ್ಪಿಎಫ್ ಸಿಬ್ಬಂದಿ ಖಾಂಡೇಕರ್ ತಕ್ಷಣವೇ ಅಲ್ಲಿಗೆ ಓಡಿ ಬಂದು ಆಕೆಯ ಪ್ರಾಣ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿರಿ: ಲೈವ್ ವಿಡಿಯೋ: ಯುವತಿಯರಿಬ್ಬರ ಮೇಲೆ ಕಾರು ಹರಿಸಿದ ಇನ್ಸ್ಪೆಕ್ಟರ್, ಒಬ್ಬಳ ಸಾವು
ರೈಲ್ವೆ ಸಿಬ್ಬಂದಿ ಒಂದೇ ಸಮಯದಲ್ಲಿ ಎರಡು ಪ್ರಾಣ ಉಳಿಸಿದ್ದರಿಂದ ಅವರ ಕಾರ್ಯಕ್ಕೆ ಇದೀಗ ಇನ್ನಿಲ್ಲದ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಘಟನೆ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ.