ಭೋಪಾಲ್ (ಮಧ್ಯಪ್ರದೇಶ): ಗರ್ಭಿಣಿಯೋರ್ವರನ್ನು ಬಟ್ಟೆ ಹಾಗೂ ಕೋಲುಗಳಿಂದ ತಯಾರಿಸಿದ ಸ್ಟ್ರೆಚರ್ ಮೂಲಕವೇ 8 ಕಿ.ಮೀ ದೂರದವರೆಗೆ ಭುಜದ ಮೇಲೆ ಹೊತ್ತುಕೊಂಡು ಹೋದ ಘಟನೆ ನಡೆದಿದೆ. ಬಾರ್ವಾನಿ ಜಿಲ್ಲೆಯ ರಾಜ್‌ಪುರ ಗ್ರಾಮದ ನಿವಾಸಿ ಸುನೀತಾಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಕೆಯ ಕುಟುಂಬದವರು ಮತ್ತು ನೆರೆಹೊರೆಯವರು ಆಕೆಯನ್ನು ಹೊತ್ತುಕೊಂಡೇ ತೆರಳಿದ್ದಾರೆ.
ಅರಣ್ಯದ ನಡುವೆ ಇರುವ ಕುಗ್ರಾಮದಿಂದ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಬೇರೆ ಮಾರ್ಗಗಳಿಲ್ಲದೆ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಯನ್ನು ಬಟ್ಟೆ ಹಾಗೂ ಕೋಲುಗಳಿಂದ ತಯಾರಿಸಿದ ಸ್ಟ್ರೆಚರ್ನಲ್ಲೇ ಕರೆದೊಯ್ಯಲಾಗಿದೆ.
8 ಕಿ.ಮೀ ದೂರದವರೆಗೆ ಹೊತ್ತುಕೊಂಡು ಸಾಗಿ ನಂತರ 20 ಕಿ.ಮೀ ಆ್ಯಂಬುಲೆನ್ಸ್ ಮೂಲಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 28 ಕಿ.ಮೀ ದೂರದಲ್ಲಿರುವ ಪನ್ಸೆಮಾಲ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವು ಹಳ್ಳಿಗೆ ಹತ್ತಿರದ ಆಸ್ಪತ್ರೆಯಾಗಿದೆ. ಅಲ್ಲಿಗೆ ಹೋಗಲು ಯಾವುದೇ ಮಾರ್ಗವಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಆರೋಗ್ಯ ಸೇವೆಗಳು ಮತ್ತು ಸಂಪರ್ಕದ ಬಗ್ಗೆ ಈ ಹಳ್ಳಿಯ ಜನರಿಂದ ಅನೇಕ ಆರೋಪಗಳಿವೆ. ಅನೇಕ ಗರ್ಭಿಣಿಯರು ಮತ್ತು ರೋಗಗಳಿಂದ ಬಳಲುತ್ತಿರುವ ಜನರು ಈ ಹಿಂದೆ ಸುನೀತಾ ಅವರಂತೆಯೇ ಕಷ್ಟ ಎದುರಿಸಿದ್ದಾರೆ. ಸುನೀತಾಗೆ ಸುಸೂತ್ರವಾಗಿ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಈ ಗ್ರಾಮದಲ್ಲಿ ರಸ್ತೆ ನಿರ್ಮಿಸಲು ಅನೇಕ ಬಾರಿ ಅರ್ಜಿಗಳನ್ನು ಸಲ್ಲಿಸಿದೆಯಾದರೂ ಯಾವುದೇ ಪ್ರಯೋಜವಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.