ಪಣಜಿ(ಗೋವಾ): ಉತ್ತರಾಖಂಡ್ ಬೆನ್ನಲ್ಲೇ ಗೋವಾ ನೂತನ ಮುಖ್ಯಮಂತ್ರಿಯನ್ನು ಬಿಜೆಪಿ ಅಂತಿಮಗೊಳಿಸಿದೆ. ಹಂಗಾಮಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನೇ ಹುದ್ದೆಯಲ್ಲಿ ಮುಂದುವರೆಸಲು ನಿರ್ಧರಿಸಲಾಗಿದೆ.
ಹೊಸ ಮುಖ್ಯಮಂತ್ರಿ ಆಯ್ಕೆಗಾಗಿ ಬಿಜೆಪಿ ಹೈಕಮಾಂಡ್, ವೀಕ್ಷಕರನ್ನಾಗಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಎಲ್.ಮುರುಗನ್ ಅವರನ್ನು ಗೋವಾಗೆ ಕಳುಹಿಸಿತ್ತು. ಪಕ್ಷದ ಕಚೇರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಶಾಸಕಾಂಗ ಪಕ್ಷದ ನಾಯಕನನ್ನಾಗಿ ಪ್ರಮೋದ್ ಸಾವಂತ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಉತ್ತರಾಖಂಡ್ ಮುಖ್ಯಮಂತ್ರಿ ಆಯ್ಕೆ: ಚುನಾವಣೆಯಲ್ಲಿ ಸೋತರೂ ಪುಷ್ಕರ್ಗೆ ಪಟ್ಟ!
ಶಾಸಕಾಂಗ ಪಕ್ಷದ ಸಭೆ ಬಳಿಕ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ವಿಶ್ವಜೀತ್ ರಾಣೆ ಅವರು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಪ್ರಮೋದ್ ಸಾವಂತ್ ಅವರ ಹೆಸರನ್ನು ಸೂಚಿಸಿದರು. ಇದಕ್ಕೆ ಎಲ್ಲ ಸದಸ್ಯರ ಕೂಡ ಅನುಮೋದನೆ ಕೊಡುವ ಮೂಲಕ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ನೇಮಿಸಿದರು. ಮುಂದಿನ ವರ್ಷದ ಅವಧಿಗೂ ಸಾವಂತ್ ಅವರೇ ಶಾಸಕಾಂಗ ಪಕ್ಷದ ನಾಯಕರಾಗಿ ಇರುತ್ತಾರೆ ಎಂದು ತಿಳಿಸಿದರು.
ಇತ್ತ, ನಿಯೋಜಿತ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾತನಾಡಿ, ಗೋವಾ ಸಿಎಂ ಆಗಿ ಮುಂದಿನ 5 ವರ್ಷಗಳ ಅವಧಿಗೆ ಕೆಲಸ ಮಾಡುವ ಈ ಅವಕಾಶ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಗೋವಾದ ಜನತೆ ನನ್ನನ್ನು ಒಪ್ಪಿಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಸಾಧ್ಯವಾದಷ್ಟು ಕೆಲಸ ಮಾಡುತ್ತೇನೆ ಎಂದರು.
ಅಲ್ಲದೇ, ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಮಾನವ ಅಭಿವೃದ್ಧಿಗೆ ನಾನು ಹೆಚ್ಚಿನ ಒತ್ತು ಕೊಡುತ್ತೇನೆ. ಪ್ರಧಾನಿ ಮೋದಿ ಅವರ ದೂರದೃಷ್ಠಿಯ ಅಭಿವೃದ್ಧಿಯನ್ನು ಗೋವಾದಲ್ಲಿ ಮುಂದುವರೆಸುತ್ತೇನೆ. ಪದಗ್ರಹಣ ಸಮಾರಂಭ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ನಾಗಾಲ್ಯಾಂಡ್‌ನಿಂದ ರಾಜ್ಯಸಭೆಗೆ ಮೊದಲ ಮಹಿಳೆ ಆಯ್ಕೆ: ಕೇರಳದಲ್ಲಿ 4 ದಶಕದ ನಂತರ ಅವಕಾಶ