ಇಂಫಾಲ (ಮಣಿಪುರ): ಮಣಿಪುರ ಹಿಂಸಾಚಾರದ ಅಸಮರ್ಪಕ ನಿರ್ವಹಣೆ ಕಾರಣಕ್ಕಾಗಿ ಮಣಿಪುರಿ ಖ್ಯಾತ ನಟ ರಾಜ್‌ಕುಮಾರ್ ಸೋಮೇಂದ್ರ ಗುರುವಾರ ಆಡಳಿತಾರೂಢ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಜನಾಂಗೀಯ ಪ್ರಕ್ಷುಬ್ಧತೆ ಹಾಗೂ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ಬೇಸರಗೊಂಡು ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸುಮಾರು 400 ಚಲನಚಿತ್ರಗಳಲ್ಲಿ ನಟಿಸಿರುವ ರಾಜ್‌ಕುಮಾರ್ ಸೋಮೇಂದ್ರ ಅವರು 'ಕೈಕು' ಎಂದೇ ಮಣಿಪುರಿ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಇಂಫಾಲ ವೆಸ್ಟ್‌ನ ತಂಗ್ಮೈಬಾಂಡ್ ಪ್ರದೇಶದ ನಿವಾಸಿಯಾದ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಳಿಕ 2021ರ ನವೆಂಬರ್ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯ ಪಕ್ಷದ ನಾಯಕತ್ವಕ್ಕೆ ಸಲ್ಲಿಸಿದ್ದಾರೆ.
"ನನ್ನ ಮೊದಲ ಆದ್ಯತೆ ಜನರು. ನಂತರ ಪಕ್ಷ ಎರಡನೆಯ ಆದ್ಯತೆ. ಹೀಗಾಗಿ ನಾನು ಈ ಕಷ್ಟದ ಸಮಯದಲ್ಲಿ ಜನರೊಂದಿಗೆ ನಿಲ್ಲಲು ನನ್ನ ಮನಸು ಹೇಳುತ್ತಿದೆ'' ಎಂದು ನಟ ಕೈಕು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೇ, ''ಕಳೆದ ನಾಲ್ಕು ತಿಂಗಳಿಗೂ ಹೆಚ್ಚು ಕಾಲದಿಂದ ರಾಜ್ಯದಲ್ಲಿ ಉಂಟಾಗಿರುವ ಸಾರ್ವಜನಿಕ ಅವ್ಯವಸ್ಥೆಯನ್ನು ಪರಿಹರಿಸಲು ಸರ್ಕಾರ ಇನ್ನೂ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ'' ಎಂದು ಹೇಳಿದ್ದಾರೆ.
ಮುಂದುವರೆದು, ''ನಿಜ ಹೇಳಬೇಕೆಂದರೆ, ಬಿಜೆಪಿ ತನ್ನ ಡಬಲ್ ಇಂಜಿನ್ ಸರ್ಕಾರದೊಂದಿಗೆ ನಮ್ಮ ರಾಜ್ಯದಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತದೆ ಎಂದು ಭಾವಿಸಿ ನಾನು ಬಿಜೆಪಿಗೆ ಸೇರಿದ್ದೆ. ಸಹಜವಾಗಿ ಸಿಎಂ ಎನ್ ಬಿರೇನ್ ಸಿಂಗ್ ನೇತೃತ್ವದಲ್ಲಿ ಸರ್ಕಾರವು ಪ್ರವಾಸೋದ್ಯಮದಂತಹ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ನಡೆಯುತ್ತಿರುವ ಸಮಸ್ಯೆಯ ಬಗ್ಗೆ ಕೇಂದ್ರ ನಾಯಕರು ತ್ವರಿತವಾಗಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಸಂಘರ್ಷವನ್ನು ಕೊನೆಗೊಳಿಸುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ಕೇಂದ್ರ ನಾಯಕರು ಜನರ ನೋವು ಮತ್ತು ದುಃಖದ ಬಗ್ಗೆ ಗಮನ ಹರಿಸದಂತಿದೆ. ಜನರ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಾಜದ ಎಲ್ಲ ವರ್ಗದವರಲ್ಲಿ ಪ್ರಸ್ತುತ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮನವಿ ಮಾಡಿರುವ ಅವರು, "ನಾನು ಬಿಜೆಪಿ ತೊರೆದಿರುವುದರಿಂದ ಸಾರ್ವಜನಿಕ ಸುವ್ಯವಸ್ಥೆಯನ್ನು ಮರುಸ್ಥಾಪಿಸುವ ಜನರ ಅಭಿಯಾನದಲ್ಲಿ ಸೇರಲು ನಾನು ಮುಕ್ತ ನಾಗರಿಕನಾಗಿದ್ದೇನೆ. ಮುಂದಿನ ಚುನಾವಣಾ ರಾಜಕೀಯದ ಬಗ್ಗೆ ಯಾವುದೇ ನಿರ್ದಿಷ್ಟ ನಿರ್ಧಾರ ಮಾಡಿಲ್ಲ. ರಾಜ್ಯದಲ್ಲಿ ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರಳಲು ನಾನು ಜನರೊಂದಿಗೆ ಒಟ್ಟಾಗಿ ಹೋಗುತ್ತೇನೆ" ಎಂದು ತಿಳಿಸಿದ್ದಾರೆ. (ಪಿಟಿಐ)
ಇದನ್ನೂ ಓದಿ: 'ಮೌನ ಬಿಟ್ಟು ಮಣಿಪುರ ಹಿಂಸಾಚಾರ ನಿಲ್ಲಿಸಿ': ಪ್ರಧಾನಿ ಮೋದಿಗೆ 11 ವರ್ಷದ ಹೋರಾಟಗಾರ್ತಿ ಲಿಸಿಪ್ರಿಯಾ ಒತ್ತಾಯ