ಕೋಲ್ಕತಾ (ಪಶ್ಚಿಮ ಬಂಗಾಳ): ಮಾಲಿನ್ಯ ನಿಯಂತ್ರಣಕ್ಕಾಗಿ ಎಲ್ಲಾ ರಾಜ್ಯಗಳು ಒಂದಲ್ಲಾ ಒಂದು ರೀತಿಯ ಕ್ರಮ ಕೈಗೊಳ್ಳುತ್ತಿವೆ. ಪಟಾಕಿ ನಿಷೇಧವೂ ಮಾಲಿನ್ಯ ನಿಯಂತ್ರಣದ ಭಾಗವಾಗಿದ್ದು, ಪಶ್ಚಿಮ ಬಂಗಾಳ ಈ ವಿಚಾರದಲ್ಲಿ ಸ್ವಲ್ಪ ಮುಂದುವರೆದಿದೆ.
ಪಶ್ಚಿಮ ಬಂಗಾಳ ಈಗಾಗಲೇ ಕಾಳಿ ಪೂಜೆ ಹಾಗೂ ಮುಂಬರುವ ಹಬ್ಬಗಳ ವೇಳೆ ಪಟಾಕಿಗಳನ್ನು ಮಾರುವುದು ಹಾಗೂ ಸಿಡಿಸುವುದನ್ನು ನಿಷೇಧಿಸಿದೆ. ಇದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಅಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜಿಪಿಎಸ್ ಅಳವಡಿಸಿದ ಶಬ್ದವನ್ನು ಗ್ರಹಿಸುವ ಸಾಧನಗಳನ್ನು ಪೊಲೀಸ್ ಠಾಣೆಗಳಿಗೆ ವಿತರಿಸಿದೆ.
ಈ ಸಾಧನ ಪಟಾಕಿ ಹಚ್ಚುವ ಸ್ಥಳಗಳನ್ನು ಗುರ್ತಿಸಿ, ಅದರ ಮಾಹಿತಿಯನ್ನು ವೇಗವಾಗಿ ಪಶ್ಚಿಮ ಬಂಗಾಳ ಪೊಲೀಸರಿಗೆ ತಲುಪಿಸಲು ನೆರವಾಗುತ್ತದೆ ಹಾಗೂ ಪಟಾಕಿ ಹಚ್ಚುವವರ ಮೇಲೆ ಕಣ್ಣಿಡಲು ಸಹಕಾರ ನೀಡುತ್ತದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಕಲ್ಯಾಣ್ ರುದ್ರ ಮಾಹಿತಿ ನೀಡಿದ್ದಾರೆ.
ಪಟಾಕಿ ಸಿಡಿಸುವ ಸ್ಥಳ, ದಿನಾಂಕ ಮತ್ತು ಸಮಯವನ್ನು ಈ ಸಾಧನ ನಿಖರವಾಗಿ ತೋರಿಸುವುದರ ಜೊತೆಗೆ ಕಾನೂನು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸಹಕಾರ ನೀಡುತ್ತದೆ ಎಂದು ಕಲ್ಯಾಣ ರುದ್ರ ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ಸಾಧನಗಳನ್ನು ಯಾವ ರೀತಿ ಬಳಸಬೇಕೆಂದು ಪೊಲೀಸರಿಗೆ ತರಬೇತಿ ನೀಡಲಾಗಿದ್ದು, ಇಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸರು ಸಮನ್ವಯತೆಯಿಂದ ಈ ಕಾರ್ಯ ನಿರ್ವಹಿಸುತ್ತಾರೆ.