ಫುಲ್ಬಾನಿ (ಒಡಿಶಾ): ಗಾಂಜಾ ಕಳ್ಳಸಾಗಣೆಯಲ್ಲಿ ಪೊಲೀಸರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ವೇಳೆ ಉದ್ರಿಕ್ತರ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಈ ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇಲ್ಲಿನ ಫಿರಿಂಗಿಯಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ ಮತ್ತು ಇತರ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಪೊಲೀಸ್ ವ್ಯಾನ್ನಲ್ಲಿ ಕಳ್ಳಸಾಗಣೆ ಗಾಂಜಾ ಸಹಿತ ಕಂಬಗುಡ್ಡದ ಗ್ರಾಮಸ್ಥರು ಸೆರೆ ಹಿಡಿದಿದ್ದರು. ಪೊಲೀಸರ ಗಾಂಜಾ ಸಾಗಾಟದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಂತರ ಠಾಣೆಗೆ ನುಗ್ಗಿದ ಜನರ ಗುಂಪು ಎಸ್‌ಡಿಪಿಒ ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನು ಬೆನ್ನಟ್ಟಿ ಹಲ್ಲೆ ನಡೆಸಿದೆ. ಎಸ್‌ಡಿಪಿಒ ಅವರಿಗೆ ಅಮಾನುಷವಾಗಿ ಥಳಿಸಲಾಗಿದೆ. ಈ ದಾಳಿಯಲ್ಲಿ ಎಸ್‌ಡಿಪಿಒ ತಲೆಗೆ ಗಾಯವಾಗಿದೆ. ಇತರ ಪೊಲೀಸ್ ಅಧಿಕಾರಿಗಳ ಮೇಲೂ ಆಕ್ರೋಶಗೊಂಡ ಗುಂಪು ದಾಳಿ ಮಾಡಿದೆ ಎಂದು ವರದಿಯಾಗಿದೆ.
ನಡೆದಿದ್ದೇನು?: ಸ್ಥಳೀಯರು ಫುಲ್ಬಾನಿ - ಫಿರಿಂಗಿಯಾ - ಬಾಲಿಗುಡಾ ರಸ್ತೆಯನ್ನು ಗಂಟೆಗಳ ಕಾಲ ತಡೆದು ಪ್ರತಿಭಟನೆ ನಡೆಸಿದರು. ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ ಮತ್ತು ಇತರ ಕೆಲವು ಸಿಬ್ಬಂದಿ ವಿರುದ್ಧ ಗಾಂಜಾ ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಪ್ರತಿಭಟನಾಕಾರರ ಜೊತೆ ಮಾತನಾಡಲು ರಸ್ತೆ ತಡೆ ಸ್ಥಳಕ್ಕೆ ಕೆಲ ಪೊಲೀಸ್ ಸಿಬ್ಬಂದಿ ತೆರಳಿದ್ದರು. ಆದರೆ, ಪೊಲೀಸ್ ಸಿಬ್ಬಂದಿಯನ್ನು ಅಲ್ಲಿಂದ ಓಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ಫಿರಿಂಗಿಯಾ ಪೊಲೀಸ್ ಠಾಣೆಗೆ ನುಗ್ಗಿದ ಉದ್ರಿಕ್ತರು ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದೆ. ಹಲವು ದಾಖಲೆಗಳನ್ನು ಸುಟ್ಟು ಹಾಕಿದ್ದಾರೆ. ಅಲ್ಲದೇ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ ಎಂದು ದಕ್ಷಿಣ ವಲಯ ಐಜಿ ಸತ್ಯಬ್ರತ ಭೋಯ್ ಹೇಳಿದ್ದಾರೆ.
ಇದೇ ವೇಳೆ, ಆರೋಪಿತ ಸ್ಥಳೀಯ ಇನ್ಸ್‌ಪೆಕ್ಟರ್ ಮತ್ತು ಇತರ ಇಬ್ಬರು ಪೊಲೀಸರ ವಿರುದ್ಧ ಸೂಕ್ತವಾದ ತನಿಖೆ ಮಾಡಲಾಗುವುದು ಎಂದು ಐಜಿ ಭೋಯ್ ಸ್ಪಷ್ಟಪಡಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಹೆಚ್ಚಿನ ಪೊಲೀಸ್ ತುಕಡಿಯನ್ನು ಸ್ಥಳಕ್ಕೆ ರವಾನಿಸಲಾಗಿದೆ. ಕಂಧಮಾಲ್ ಎಸ್ಪಿ ಹೆಚ್ಚಿನ ಪೊಲೀಸ್ ಬಲದೊಂದಿಗೆ ಫಿರಿಂಗಿಯಾಗೆ ತೆರಳಿದ್ದಾರೆ ಎಂದು ಐಜಿ ಮಾಹಿತಿ ನೀಡಿದ್ದಾರೆ. ಫಿರಿಂಗಿಯಾ ಪೊಲೀಸ್ ಠಾಣೆ ಬಳಿ ನಡೆದ ಈ ಹಿಂಸಾಚಾರದಲ್ಲಿ ಕೆಲವು ಗಾಂಜಾ ವ್ಯಾಪಾರಿಗಳು ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Manipur Violence: ಮಣಿಪುರದಲ್ಲಿ 10 ಮನೆಗಳು, ಶಾಲೆಗೆ ಬೆಂಕಿ ಹಚ್ಚಿದ ಶಸ್ತ್ರಸಜ್ಜಿತ ಮಹಿಳಾ ಬಂಡುಕೋರರ ಗುಂಪು