ಹೈದರಾಬಾದ್ (ತೆಲಂಗಾಣ): ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ನಾಲ್ವರು ಶಾಸಕರಿಗೆ ಹಣದ ಅಮಿಷವೊಡ್ಡಿ ಖರೀದಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ನಾಲ್ವರನ್ನು ಪೊಲೀಸರು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಕುರಿತು ತನಿಖೆ ಚುರುಕುಗೊಳಿಸಿರುವ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ 8ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಮೊಯಿನಾಬಾದ್‌ನಲ್ಲಿರುವ ಫಾರ್ಮ್‌ಹೌಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿಗೆ ಸೇರಿದ್ದಾಗಿದ್ದು, ಶಂಶಾಬಾದ್ ಡಿಸಿಪಿ ಜಗದೀಶ್ವರ್ ರೆಡ್ಡಿ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ, ಪ್ರಕರಣದ ಪೂರ್ವಾಪರಗಳನ್ನು ಪರಿಶೀಲಿಸುತ್ತಿದ್ದಾರೆ. ಈಗಾಗಾಲೇ ನೋಟುಗಳ ಬಂಡಲ್ಗಳೊಂದಿಗೆ ಸಿಕ್ಕಿಬಿದ್ದ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಫಾರ್ಮ್‌ಹೌಸ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮತ್ತೊಮ್ಮೆ ತೀವ್ರ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ: ಟಿಆರ್ಎಸ್ನ ನಾಲ್ವರು ಶಾಸಕರ ಖರೀದಿ ಯತ್ನ: ಫಾರ್ಮ್‌ಹೌಸ್‌ನಲ್ಲಿ ನೋಟುಗಳ ಬಂಡಲ್ ಸಮೇತ ನಾಲ್ವರ ಸೆರೆ
ಪಕ್ಷಾಂತರಕ್ಕೆ ಪ್ರೋತ್ಸಾಹಿಸಿದವರು ಯಾರು?. ಹಣ ಕೊಟ್ಟವರು ಯಾರು? ಇದರಲ್ಲಿ ಮಾಸ್ಟರ್ ಮೈಂಡ್ ಯಾರು?, ಸೆಲ್ ಫೋನ್ ನಲ್ಲಿ ಯಾರೊಂದಿಗೆ ಮಾತನಾಡಿದ್ದಾರೆ ಎಂಬುದರ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಶಾಸಕರ ಖರೀದಿಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 8 ರ ಅಡಿ ಸೆಕ್ಷನ್ 120 ಬಿ ಅಡಿ ಪ್ರಕರಣ ದಾಖಲಿಸಲಾಗಿದೆ. ಮೊಯಿನಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮೂವರು ಆರೋಪಿಗಳನ್ನು ಇಂದು ಉಪ್ಪಾರಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.