ತಮಿಳುನಾಡು/ಆಂಧ್ರಪ್ರದೇಶ: ಕೃಷ್ಣಗಿರಿಯ ಮಹಿಳೆಯರನ್ನು ವಿವಸ್ತ್ರಗೊಳಿಸಿ, ಕಳ್ಳತನ ಮಾಡಿರುವುದನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡಿ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆಯೊಬ್ಬರು ತಮಿಳುನಾಡು ಡಿಜಿಪಿ ಕಚೇರಿಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಆಂಧ್ರ ಪ್ರದೇಶದ ಪೊಲೀಸರು, ತಮಿಳುನಾಡು ಪೊಲೀಸರೊಂದಿಗೆ ಶಾಮೀಲಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಮಿಳಿನ 'ವಿಸಾರಣೈ' ಸಿನಿಮಾದಲ್ಲಿ (ಭಾರತದಲ್ಲಿ ವಿಚಾರಣೆ - ಆಸ್ಕರ್ ನಾಮನಿರ್ದೇಶಿತ ಚಲನಚಿತ್ರ) ಆಂಧ್ರ ಪೊಲೀಸರು ತಮಿಳುನಾಡಿನ ಯುವಕರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಅಪರಾಧವನ್ನು ಒಪ್ಪಿಕೊಳ್ಳುವಂತೆ ಕೇಳುವ ದೃಶ್ಯಗಳಿವೆ. ಜೈ ಭೀಮ್ ಚಿತ್ರದಲ್ಲಿ ಇರುಳ ಬುಡಕಟ್ಟು ಸಮುದಾಯದ ಜನರು ಅಪರಾಧವನ್ನು ಒಪ್ಪಿಕೊಂಡ ನಂತರ ಅಮಾನುಷವಾಗಿ ಹಲ್ಲೆ ಮಾಡುವ ದೃಶ್ಯಗಳಿವೆ. ಇಂಥ ಸಿನಿಮಾಗಳ ದೃಶ್ಯಗಳನ್ನು ಮೀರಿಸುವಷ್ಟು ಕಿರುಕುಳ ನೀಡಿರುವ ಘಟನೆ ಇದು ಎಂದು ಕೃಷ್ಣಗಿರಿ ಜಿಲ್ಲೆಯ ಕುರವರ್ ಸಮುದಾಯದ ಮಹಿಳೆಯರು ಚೆನ್ನೈ ಡಿಜಿಪಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಕೃಷ್ಣಗಿರಿ ಜಿಲ್ಲೆ ಬೋಚಂಪಲ್ಲಿ ತಾಲೂಕಿನ ಮತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಪುಲ್ಯಾಂಡಪಟ್ಟಿ ಗ್ರಾಮ ಮಹಿಳೆಯರು ದೂರು ಸಲ್ಲಿಸಿದ್ದು, ಪೊಲೀಸರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತ ಮಹಿಳೆ, "ಜೂನ್ 11ರಂದು ಆಂಧ್ರ ಪ್ರದೇಶದ ಚಿತ್ತೂರು ಪೊಲೀಸರು ಕಳ್ಳತನ ಪ್ರಕರಣದಲ್ಲಿ ನನ್ನ ಪತಿ ವೈರಮುತ್ತುಗಾಗಿ ಹುಡುಕಾಟ ನಡೆಸುತ್ತಿದ್ದರು. ನಾನು ಪತಿ ಕೇರಳಕ್ಕೆ ಕೂಲಿ ಕೆಲಸಕ್ಕೆ ಹೋಗಿರುವುದಾಗಿ ತಿಳಿಸಿದ್ದೇನೆ. ಹೀಗಾಗಿ ನನ್ನನ್ನು ಮತ್ತು ಅತ್ತೆಯನ್ನು 11ರಂದು ರಾತ್ರಿ ಚಿತ್ತೂರು ಠಾಣೆಗೆ ಕರೆದೊಯ್ದು ಥಳಿಸಿ, ಕಳ್ಳತನ ಮಾಡಿರುವುದನ್ನು ಒಪ್ಪಿಕೊಳ್ಳುವಂತೆ ಥಳಿಸಿ ಚಿತ್ರಹಿಂಸೆ ನೀಡಿದರು. ಪುರುಷ ಪೊಲೀಸರು ನನ್ನನ್ನು ಬೆತ್ತಲೆಯಾಗಿ ಮಾಡಿ ವಿಡಿಯೋ ತೆಗೆದು ಖುಷಿ ಪಡುತ್ತಿದ್ದರು. ಕಳ್ಳತನ ಮಾಡಿರುವುದನ್ನು ಒಪ್ಪಿಕೊಳ್ಳದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುವುದಾಗಿ ಬೆದರಿಕೆ ಹಾಕಿದರು."
"ನನಗೆ ದೇಹದ ಹಿಂಬದಿಗೆ ಹೊಡೆದರು. ಜಾತಿ ಬಗ್ಗೆ ಅವಹೇಳನ ಮಾಡಿದರು. ಗಂಡನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದರು. ಲೈಂಗಿಕ ಕಿರುಕುಳ ಸಹಿಸಲಾರದೆ ನಾನು ಸಾಯಲು ಪ್ರಯತ್ನಿಸಿದೆ. ಕಬ್ಬಿಣದ ಸಲಾಕೆ ತಂದು ಅದಕ್ಕೆ ಮೆಣಸಿನಕಾಯಿ ಹಚ್ಚಿ ಜನನಾಂಗಕ್ಕೆ ಹಾಕುತ್ತೇವೆ ಎಂದು ಪೊಲೀಸರು ಎಂದು ಹೆದರಿಸಿದರು" ಎಂದು ಅವರು ವಿವರಿಸಿದರು.
''ಆ ಅಂಗಡಿಯಲ್ಲಿ ನೀನು ಆಭರಣ ಕೊಟ್ಟಿದ್ದೇನೆ ಎಂದು ಒಂದು ಮಾತು ಹೇಳು. ನಿಮ್ಮಿಬ್ಬರನ್ನು ಹಾಗೆಯೇ ಬಿಟ್ಟು ಬಿಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುವುದಿಲ್ಲ ಎಂದು ಹೇಳಿ 5 ದಿನಗಳ ಕಾಲ ಹೊಡೆದು ಚಿತ್ರಹಿಂಸೆ ನೀಡಿದರು. ನಾವು ಒಪ್ಪಿಗೆ ನೀಡಿದ ನಂತರ ಆಂಧ್ರ ಜೈಲಿಗೆ ಹಾಕಿದರು. ಆಂಧ್ರ ಪೊಲೀಸರು ನನ್ನ ಹಳ್ಳಿಯಿಂದ ತನ್ನ ಅತ್ತೆ ಮತ್ತು ಐದಕ್ಕೂ ಹೆಚ್ಚು ಮಹಿಳೆಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಅವರನ್ನೂ ವಿವಸ್ತ್ರಗೊಳಿಸಿ ಮತ್ತು ಕಳ್ಳತನ ಪ್ರಕರಣಗಳನ್ನು ಒಪ್ಪಿಕೊಳ್ಳುವಂತೆ ಚಿತ್ರಹಿಂಸೆ ನೀಡಿದರು" ಎಂದು ಕಣ್ಣೀರು ಹಾಕಿದರು.
"ವಿಚಾರಣೆಯ ಹೆಸರಿನಲ್ಲಿ ನಮ್ಮನ್ನು ಕ್ರೂರವಾಗಿ ಹಿಂಸಿಸಲಾಯಿತು. ಲೈಂಗಿಕವಾಗಿ ಹಲ್ಲೆ ನಡೆಸಿದರು ಎಂದು ಹಲ್ಲೆಗೊಳಗಾದ ಮಹಿಳೆಯರು ಹೇಳುತ್ತಾರೆ. ಘಟನೆಯ ಕುರಿತು ಕೃಷ್ಣಗಿರಿ ಜಿಲ್ಲಾ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರು ಆಂಧ್ರಪ್ರದೇಶ ಪೊಲೀಸರಿಗೆ ಬೆಂಬಲವಾಗಿ ವರ್ತಿಸುತ್ತಿದ್ದಾರೆ" ಎಂದು ಸಂತ್ರಸ್ತ ಮಹಿಳೆಯರು ಆರೋಪಿಸಿದ್ದಾರೆ.
ಸುಳ್ಳು ಪ್ರಕರಣ ರದ್ದುಪಡಿಸಿ, ನ್ಯಾಯ ಕೊಡಿಸಲು ಒತ್ತಾಯ: ಈ ಘಟನೆಯಲ್ಲಿ ಉಭಯ ರಾಜ್ಯಗಳ ಪೊಲೀಸರು ವಿಶ್ವಾಸಾರ್ಹ ರೀತಿಯಲ್ಲಿ ನಡೆದುಕೊಳ್ಳದ ಕಾರಣ ಈ ಪ್ರಕರಣದ ತನಿಖೆಯನ್ನು ಸಿಬಿಐ ನೇರವಾಗಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಸುಮಾರು 20 ಆಂಧ್ರ ಪ್ರದೇಶದ ಕಾನ್‌ಸ್ಟೆಬಲ್‌ಗಳು ಮತ್ತು ತಮಿಳುನಾಡು ಕಾನ್‌ಸ್ಟೆಬಲ್‌ಗಳ ವಿರುದ್ಧ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಅವರನ್ನು ಶಾಶ್ವತವಾಗಿ ಕೆಲಸದಿಂದ ವಜಾಗೊಳಿಸಿ, ತಮ್ಮ ಮೇಲಿನ ಎಲ್ಲ ಸುಳ್ಳು ಪ್ರಕರಣಗಳನ್ನು ರದ್ದುಪಡಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಮಾಧ್ಯಮಗೋಷ್ಠಿಯಲ್ಲಿ ಮಹಿಳೆಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಿಡುವಿಲ್ಲದೇ ಮಾಧ್ಯಮಗಳಿಗೆ ಸಂದರ್ಶನ: ಪಾಕಿಸ್ತಾನದ ಸೀಮಾ ಹೈದರ್ ಸುಸ್ತು