ಮಂಡಿ(ಹಿಮಾಚಲ ಪ್ರದೇಶ): ಹಿಮಾಚಲದ ಮಂಡಿ ಜಿಲ್ಲೆಯ ಟಿಬೆಟಿಯನ್ ಮಠದಲ್ಲಿ ಚೀನಾ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, 6 ಲಕ್ಷದ 40 ಸಾವಿರ ರೂ. ಭಾರತೀಯ ಕರೆನ್ಸಿ ಮತ್ತು 1 ಲಕ್ಷದ 10 ಸಾವಿರ ರೂ. ನೇಪಾಳಿ ಕರೆನ್ಸಿಯನ್ನ ವಶಪಡಿಸಿಕೊಳ್ಳಲಾಗಿದೆ. ಅಕ್ಟೋಬರ್ 22ರ ರಂದು ಮಹಿಳೆಯನ್ನು ಬಂಧಿಸಿದ್ದು, ಮಾಹಿತಿಯನ್ನ ಪೊಲೀಸರು ಗೌಪ್ಯವಾಗಿಟ್ಟಿದ್ದರು.
ಜೋಗಿಂದರ್‌ನಗರ ಉಪವಿಭಾಗದ ಚೌಂತಾರದಲ್ಲಿರುವ ಮಠದಲ್ಲಿ ಕಳೆದ 15 ದಿನಗಳಿಂದ ಮಹಿಳೆಯೊಬ್ಬರು ವಾಸಿಸುತ್ತಿದ್ದು, ತಾನು ನೇಪಾಳ ಮೂಲದವಳೆಂದು ಹಾಗೂ ಬೌದ್ಧ ಧರ್ಮದ ಶಿಕ್ಷಣ ಪಡೆಯಲು ಇಲ್ಲಿಗೆ ಬಂದಿರುವುದಾಗಿ ಹೇಳಿಕೊಳ್ಳುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇದರ ಆಧಾರದ ಮೇಲೆ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿ, ಮಹಿಳೆಯನ್ನು ವಿಚಾರಣೆಗೊಳಪಡಿದ್ದಾರೆ. ಈ ವೇಳೆ ಅವರ ಕೊಠಡಿಯಲ್ಲಿ ಕೆಲವು ಅನುಮಾನಾಸ್ಪದ ದಾಖಲೆಗಳು ಪತ್ತೆಯಾಗಿವೆ.
ಈ ದಾಖಲೆಗಳಲ್ಲಿ ಮಹಿಳೆ ಚೀನಾದಿಂದ ಮತ್ತು ಕೆಲವು ದಾಖಲೆಗಳು ನೇಪಾಳದಿಂದ ಬಂದಿರುವುದಾಗಿ ತಿಳಿದು ಬಂದಿದ್ದು, ಎರಡೂ ದಾಖಲೆಗಳಲ್ಲಿ ಮಹಿಳೆಯ ವಯಸ್ಸನ್ನು ಪ್ರತ್ಯೇಕವಾಗಿ ಬರೆಯಲಾಗಿದೆ. ಜೊತೆಗೆ ಮಹಿಳೆ ಬಳಿ 6 ಲಕ್ಷದ 40 ಸಾವಿರ ಭಾರತೀಯ ಕರೆನ್ಸಿ ಮತ್ತು 1 ಲಕ್ಷದ 10 ಸಾವಿರ ನೇಪಾಳಿ ಕರೆನ್ಸಿ ದೊರೆತಿದ್ದು, ಪೊಲೀಸರು ವಶಪಡಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 1 ಕೋಟಿ ನಗದು, 15 ಕೆಜಿ ಚಿನ್ನಕ್ಕಾಗಿ ಉದ್ಯಮಿ ಪುತ್ರನ ಕಿಡ್ನಾಪ್: ಅಪಹರಣಕಾರರು ಅರೆಸ್ಟ್
ಮಹಿಳೆ ಬಳಿ ಎರಡು ಮೊಬೈಲ್ ಫೋನ್ ಕೂಡ ಇದ್ದು, ಅವುಗಳನ್ನು ಹೆಚ್ಚಿನ ತನಿಖೆಗಾಗಿ ಕಳುಹಿಸಲಾಗಿದೆ. ಅಕ್ಟೋಬರ್ 23 ರಂದು ಆರೋಪಿಯನ್ನ ಜೋಗಿಂದರ್‌ನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 27 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಮಹಿಳೆ ಯಾವ ಉದ್ದೇಶಕ್ಕಾಗಿ ಇಲ್ಲಿ ವಾಸಿಸುತ್ತಿದ್ದರು ಎಂಬ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಅಂತಾ ಮಂಡಿ ಎಸ್ಪಿ ಶಾಲಿನಿ ಅಗ್ನಿಹೋತ್ರಿ ಖಚಿತಪಡಿಸಿದ್ದಾರೆ.