ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನಾಳೆ ಉತ್ತರಪ್ರದೇಶದ ಖುಷಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10ರ ಸುಮಾರಿಗೆ ಉದ್ಘಾಟನಾ ಸಮಾರಂಭ ನಡೆಯುವ ಸಾಧ್ಯತೆ ಇದೆ.
ಉದ್ಘಾಟನೆಯ ಬಳಿಕ ಮೊದಲ ವಿಮಾನವು ಕೊಲಂಬೊದಿಂದ ನೂತನ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ವಿಮಾನದಲ್ಲಿ 100ಕ್ಕೂ ಹೆಚ್ಚು ಬೌದ್ಧ ಸನ್ಯಾಸಿಗಳು ಮತ್ತು ಗಣ್ಯರ ನಿಯೋಗ ಇರಲಿದೆ.
ಈ ವಿಮಾನ ನಿಲ್ದಾಣವನ್ನು ಅಂದಾಜು 260 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭಗವಾನ್ ಬುದ್ಧನ ಮಹಾ ಪರಿನಿರ್ವಾಣ ಸ್ಥಳಕ್ಕೆ ತಡೆರಹಿತ ಸಂಪರ್ಕ ಒದಗಿಸುವ ಮೂಲಕ ದೇಶೀಯ ಹಾಗೂ ಅಂತಾರಾಷ್ಟ್ರೀಯ ಯಾತ್ರಿಕರಿಗೆ ಅನುಕೂಲವಾಗಲಿದೆ.
ಖುಷಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ನಂತರ, ಮಹಾಪರಿನಿರ್ವಾಣ ದೇವಸ್ಥಾನದಲ್ಲಿ ‘ಅಭಿಧಮ್ಮ’ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಭಗವಾನ್ ಬುದ್ಧನ ಪ್ರತಿಮೆಗೆ ಪ್ರಾರ್ಥನೆ ಸಲ್ಲಿಸಿದ ನಂತರ ಮೋದಿ ಬೋಧಿ ವೃಕ್ಷವನ್ನು ನೆಡಲಿದ್ದಾರೆ.
ಇದಾದ ನಂತರ 280 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಾಜಕೀಯ, ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾಲೇಜಿನಲ್ಲಿ 500 ಹಾಸಿಗೆಯ ಆಸ್ಪತ್ರೆ ಇರಲಿದೆ. 2022-23ನೇ ಸಾಲಿನಲ್ಲಿ 100 ವಿದ್ಯಾರ್ಥಿಗಳಿಗೆ ಮೊದಲ ಪ್ರವೇಶಾತಿಗೆ ಮುಕ್ತವಾಗಲಿದೆ.
ಓದಿ : ಅಧಿಕೃತವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಾಬುಲ್ ಸುಪ್ರಿಯೋ