ನವದೆಹಲಿ: ಸೆಂಟ್ರಲ್ ವಿಸ್ಟಾ ಪುನರ್ನಿರ್ಮಾಣ ಯೋಜನೆಯ ಮೂಲಕ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈಗ ರಕ್ಷಣಾ ಇಲಾಖೆಯ ಸುಮಾರು 7 ಸಾವಿರ ಉದ್ಯೋಗಿಗಳನ್ನು ಹೊಂದಿದ ಕಚೇರಿ ಮತ್ತು ಇತರ ಸಂಸ್ಥೆಗಳು ಬೇರೆಡೆಗೆ ಸ್ಥಳಾಂತರವಾಗಲಿದೆ.
ಆಫ್ರಿಕಾ ಅವೆನ್ಯೂ ಮತ್ತು ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಎರಡು ಹೊಸ ಕಟ್ಟಡ ಸಂಕೀರ್ಣಗಳಿಗೆ ರಕ್ಷಣಾ ಇಲಾಖೆ ಸ್ಥಳಾಂತರಗೊಳ್ಳಲಿದ್ದು, ಗುರುವಾರ ಪ್ರಧಾನಿ ಮೋದಿ ಈ ಸಂಕೀರ್ಣಗಳ ಉದ್ಘಾಟನೆ ಮಾಡಲಿದ್ದಾರೆ.
ಈಗಿರುವ ರಕ್ಷಣಾ ಸಚಿವಾಲಯ ಸೌತ್ ಬ್ಲಾಕ್ ಬಳಿಯ ಡಾಲ್ ಹೌಸಿ ರಸ್ತೆಯಲ್ಲಿದ್ದು, ಕಚೇರಿ ತೆರವಾದ ನಂತರ ಆ ಕಚೇರಿಯನ್ನು ಸೆಂಟ್ರಲ್ ವಿಸ್ಟಾ ಪುನರ್ನಿಮಾಣ ಯೋಜನೆಯ ಅಡಿ ಪ್ರಧಾನ ಮಂತ್ರಿಯವರ ಹೊಸ ನಿವಾಸ ಮತ್ತು ಕಚೇರಿಯನ್ನಾಗಿ ಪುನರ್ ಅಭಿವೃದ್ಧಿಪಡಿಸಲಾಗುತ್ತದೆ.
ರಕ್ಷಣಾ ಸಚಿವಾಲಯದ ಕಚೇರಿಯ ಸ್ಥಳಾಂತರದಿಂದ ಸುಮಾರು 50 ಎಕರೆ ಭೂಮಿ ತೆರವಾಗುವ ಸಾಧ್ಯತೆಯಿದೆ. ಆಫ್ರಿಕಾ ಅವೆನ್ಯೂದಲ್ಲಿನ ಕಚೇರಿ ಸಂಕೀರ್ಣವು ಏಳು ಅಂತಸ್ತಿನ ಜಾಗವಾಗಿದ್ದು, ಇದು ರಕ್ಷಣಾ ಸಚಿವಾಲಯದ ಕಚೇರಿಗಳನ್ನು ಮಾತ್ರ ಹೊಂದಿದೆ.
ಆದರೆ, ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಎಂಟು ಅಂತಸ್ತಿನ ಕಟ್ಟಡವನ್ನು ಸದ್ಯಕ್ಕೆ ಪರಿವಾಹನ್ ಭವನ ಮತ್ತು ಶ್ರಮ ಶಕ್ತಿ ಭವನದಲ್ಲಿ ನೌಕರರಿಗೆ ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗುತ್ತದೆ. ಕೇಂದ್ರೀಯ ಕಾರ್ಯಾಲಯ ಸಂಕೀರ್ಣದಲ್ಲಿ ಹೊಸ ಕಚೇರಿಗಳನ್ನು ನಿರ್ಮಿಸಿದ ನಂತರ ಆ ನೌಕರರನ್ನು ಸ್ಥಳಾಂತರ ಮಾಡಲಾಗುತ್ತದೆ.
ಆಫ್ರಿಕಾ ಅವೆನ್ಯೂದಲ್ಲಿ ನಾಲ್ಕು ಬ್ಲಾಕ್‌ಗಳಿದ್ದು, 5.08 ಲಕ್ಷ ಚದರ ಅಡಿಯಲ್ಲಿ ಜಾಗವನ್ನು ಹೊಂದಿದೆ. ಕಸ್ತೂರಬಾ ಗಾಂಧಿ ಮಾರ್ಗವು 4.52 ಲಕ್ಷ ಚದರ ಅಡಿಗಳ ಮೂರು ಬ್ಲಾಕ್‌ಗಳನ್ನು ಹೊಂದಿದೆ. ಎರಡು ಸಂಕೀರ್ಣಗಳು ಒಟ್ಟಾಗಿ 1,500 ಕಾರುಗಳಿಗೆ ಪಾರ್ಕಿಂಗ್ ಸ್ಥಳ ಹೊಂದಿವೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳು ಆಧುನಿಕ ಸೌಕರ್ಯಗಳು, ಸಂಪರ್ಕ ಮತ್ತು ಕ್ಯಾಂಟೀನ್ ಮತ್ತು ಬ್ಯಾಂಕುಗಳನ್ನೂ ಕೂಡಾ ಹೊಂದಿರಲಿವೆ.
ಇದನ್ನೂ ಓದಿ: ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಪ್ರಬಲ ಭೂಕಂಪನ