ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಪಂಚರಾಜ್ಯ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಚುನಾವಣೆ ತಯಾರಿಯಲ್ಲಿ ನಿರತವಾಗಿವೆ.
ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸಲು ಹರಸಾಹಸ ಪಡುತ್ತಿರುವ ಬಿಜೆಪಿ ಅಲ್ಲಿ ಹೆಚ್ಚಿನ ಪ್ರಚಾರ ಸಭೆಗಳನ್ನು ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಒಟ್ಟು 20 ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ಇದರ ಜತೆಗೆ ಅಸ್ಸೋಂನಲ್ಲಿ 6 ಸಭೆಗಳಲ್ಲಿ ಚುನಾವಣಾ ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ: ಮೋದಿ ಹೊಗಳಿದ ಆಜಾದ್ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಕಾರ್ಯಕರ್ತರು
ಪಶ್ಚಿಮ ಬಂಗಾಳದ 23 ಜಿಲ್ಲೆ, ಅಸ್ಸೋಂನ 33 ಜಿಲ್ಲೆಗಳಲ್ಲಿ ಮೋದಿ ಅಬ್ಬರದ ಮತಬೇಟೆ ನಡೆಸುತ್ತಾರೆ. ಪ.ಬಂಗಾಳದ 294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 27ರಿಂದ ಆರಂಭಗೊಂಡು ಏಪ್ರಿಲ್ 29ರಂದು ಪ್ರಚಾರ ಮುಕ್ತಾಯಗೊಳ್ಳಲಿದೆ. ಅಸ್ಸೋಂನಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಫಲಿತಾಂಶ ಮೇ 2ರಂದು ಹೊರಬೀಳಲಿದೆ.
ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಆಪರೇಷನ್ ಕಮಲ ನಡೆಸಿರುವ ಬಿಜೆಪಿ ಕೆಲವು ಟಿಎಂಸಿ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕ್ರಿಕೆಟರ್ ಅಶೋಕ್ ದಿಂಡಾ ಕೂಡ ಕಮಲ ಪಕ್ಷ ಸೇರಿದ್ದಾರೆ.