ನೌಶೇರಾ(ಜಮ್ಮು-ಕಾಶ್ಮೀರ): ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಗಡಿಯಲ್ಲಿ ದೇಶ ಕಾಯುತ್ತಿರುವ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ. ಜಮ್ಮು-ಕಾಶ್ಮೀರದ ನೌಶೇರಾಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಯೋಧರ ಭೇಟಿಗೂ ಮುನ್ನ ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ಯೋಧರನ್ನುದ್ದೇಶಿ ಮಾತನಾಡಿದ್ದಾರೆ.
ನಾನು ಪ್ರತಿ ದೀಪಾವಳಿಯನ್ನು ನಮ್ಮ ಗಡಿ ಕಾಯುವ ಸೈನಿಕರೊಂದಿಗೆ ಕಳೆದಿದ್ದೇನೆ. ಇಂದು ಇಲ್ಲಿ ನಮ್ಮ ಸೈನಿಕರಿಗಾಗಿ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ನನ್ನೊಂದಿಗೆ ತಂದಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.
ನಮ್ಮ ಸೈನಿಕರು 'ಮಾ ಭಾರತಿ'ಯ 'ಸುರಕ್ಷಾ ಕವಚ'. ನಿಮ್ಮೆಲ್ಲರಿಂದಾಗಿ ನಮ್ಮ ದೇಶದ ಜನರು ಶಾಂತಿಯುತವಾಗಿ ಮಲಗಲು ಮತ್ತು ಹಬ್ಬಗಳ ಸಮಯದಲ್ಲಿ ಸಂತೋಷವಾಗಿರಲು ಸಾಧ್ಯವಾಗಿದೆ ಎಂದು ಯೋಧರ ಸೇವೆಯನ್ನು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
ಇದಾಗ ಬಳಿಕ ಪ್ರಧಾನಿ ಮೋದಿ ಸೈನಿಯಕರ ಬಳಿಗೆ ತೆರಳಿದ ಸಿಹಿ ತಿನಿಸಿ ದೀಪಾವಳಿಯ ಶುಭಾಶಯ ಕೋರಿದರು. ಈ ವೇಳೆ ಹಿರಿಯ ಸೇನಾ ಅಧಿಕಾರಿಗಳು ಜೊತೆಗಿದ್ದರು.
2014ರಿಂದಲೂ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ ಪ್ರಧಾನಿ ಮೋದಿ, ಕಳೆದ ವರ್ಷದ ದೀಪಾವಳಿ ಸಂದರ್ಭದಲ್ಲಿ ರಾಜಸ್ಥಾನದ ಜೈಸಲ್ಮೇರ್‌ನ ಲೊಂಗೇವಾಲಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ ಅವರು ನಿನ್ನೆ ಈ ಭಾಗದಲ್ಲಿ ವೈಮಾನಿಕ ಪರಿಶೀಲನೆ ನಡೆಸಿದ್ದು, ಜಮ್ಮು ಪ್ರದೇಶದಲ್ಲಿನ ಗಡಿ ನಿಯಂತ್ರಣ ರೇಖೆಯ (LOC) ಉದ್ದಕ್ಕೂ ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದರು.