ಕಾರ್ಗಿಲ್ (ಲಡಾಖ್): ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಗಡಿಯಲ್ಲಿ ದೇಶ ಕಾಯುತ್ತಿರುವ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಲಡಾಖ್ನ ಕಾರ್ಗಿಲ್ಗೆ ಭೇಟಿ ನೀಡಿದ್ದಾರೆ.
2014ರಿಂದಲೂ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ ಪ್ರಧಾನಿ ಮೋದಿ, ಕಳೆದ ವರ್ಷದ ದೀಪಾವಳಿ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ನೌಶೇರಾಗೆ ಭೇಟಿ ನೀಡಿದ್ದರು. ಬಳಿಕ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಇನ್ನು ಪ್ರಧಾನಿ ಮೋದಿ ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೊರಿದ್ದಾರೆ.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ದೀಪಾವಳಿಯು ಹೊಳಪು ಮತ್ತು ಕಾಂತಿಯೊಂದಿಗೆ ಸಂಬಂಧಿಸಿದೆ. ಈ ಪವಿತ್ರ ಹಬ್ಬವು ನಮ್ಮ ಜೀವನದಲ್ಲಿ ಸಂತೋಷ ಮತ್ತು ಯೋಗಕ್ಷೇಮದ ಉತ್ಸಾಹವನ್ನು ಹೆಚ್ಚಿಸಲಿ. ನೀವೆಲ್ಲರೂ ಕುಟುಂಬ ಮತ್ತು ಸ್ನೇಹಿತರೊಂದಿಗೆ ಅದ್ಭುತವಾದ ದೀಪಾವಳಿಯನ್ನು ಆಚರಿಸುತ್ತಿದ್ದೀರಾ ಎಂದು ನಾನು ಭಾವಿಸುತ್ತೇನೆ ಅಂತಾ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಎಂಟು ವರ್ಷಗಳಿಂದ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಸೈನಿಕರೊಂದಿಗೆ ಸದಾ ದೀಪಾವಳಿ ಹಬ್ಬವನ್ನು ಆಚರಿಸುತ್ತಲೇ ಬಂದಿದ್ದಾರೆ.
- 23 ಅಕ್ಟೋಬರ್ 2014: ಮೇ 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರ ನಂತರ 23 ಅಕ್ಟೋಬರ್ 2014 ರಂದು ಅವರು ಸಿಯಾಚಿನ್‌ನಲ್ಲಿ ಪ್ರಧಾನಿಯಾಗಿ ಮೊದಲ ದೀಪಾವಳಿಯನ್ನು ಆಚರಿಸಿದರು.
- ನವೆಂಬರ್ 11, 2015: ಸಿಯಾಚಿನ್ ಬಳಿಕ ಪಂಜಾಬ್‌ನಲ್ಲಿ ಸೈನಿಕರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಎರಡನೇ ದೀಪಾವಳಿ ಆಚರಿಸಿದರು. ಇಲ್ಲಿ ಅವರು 1965 ರ ಯುದ್ಧದ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದರು.
- 30 ಅಕ್ಟೋಬರ್ 2016: ಪ್ರಧಾನಿ ಮೋದಿಯವರು 2016 ರಲ್ಲಿ ದೀಪಾವಳಿಯನ್ನು ಆಚರಿಸಲು ಹಿಮಾಚಲದ ಕಿನ್ನೌರ್‌ಗೆ ತೆರಳಿದ್ದರು. ಇಲ್ಲಿ ಅವರು ಭಾರತ-ಚೀನಾ ಗಡಿಯ ಬಳಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು.
- 18 ಅಕ್ಟೋಬರ್ 2017: 2017 ರಲ್ಲಿಯೂ ಪ್ರಧಾನಿ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. ನಂತರ ಅವರು ಜಮ್ಮು ಮತ್ತು ಕಾಶ್ಮೀರದ ಗುರೇಜ್ ತೆರಳಿದ್ದರು.
- 7 ನವೆಂಬರ್ 2018: 2018 ರಲ್ಲಿ, ಪ್ರಧಾನಿ ಮೋದಿ ಅವರು ಉತ್ತರಾಖಂಡದ ಹರ್ಷಿಲ್‌ನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಆಚರಿಸಿದ್ದು ಇಲ್ಲಿ ಸ್ಮರಿಸಬಹುದು.
- 27 ಅಕ್ಟೋಬರ್ 2019: ಪ್ರಧಾನಿ ಮೋದಿ 2019 ರಲ್ಲಿ ಎಲ್ಒಸಿ ಉದ್ದಕ್ಕೂ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. ನಿಯಂತ್ರಣ ರೇಖೆಯಲ್ಲಿ ನಿಯೋಜನೆಗೊಂಡಿರುವ ಸೈನಿಕರನ್ನು ಭೇಟಿ ಮಾಡಲು ಪ್ರಧಾನಿ ಮೋದಿ ರಜೌರಿಗೆ ಬಂದಿದ್ದರು.
- 14 ನವೆಂಬರ್ 2020: ಪ್ರಧಾನಿ ಮೋದಿ ಅವರು ಜೈಸಲ್ಮೇರ್‌ನ ಲಾಂಗೆವಾಲಾ ಪೋಸ್ಟ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು.
- ನವೆಂಬರ್ 4, 2021: 2021 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಾಜೌರಿಯ ನೌಶೇರಾ ಸೆಕ್ಟರ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು.
ಪ್ರತಿ ವರ್ಷ ಪ್ರಧಾನಿ ಮೋದಿ ಅವರು ದೀಪಾವಳಿ ಹಬ್ಬದಂದು ನಿರಂತರವಾಗಿ ವಿವಿಧ ಸ್ಥಳಗಳಿಗೆ ಹೋಗುತ್ತಿದ್ದಾರೆ. ಅವರು ಅಕ್ಟೋಬರ್ 21 ರಂದು ಬಾಬಾ ಕೇದಾರನಾಥ ಮತ್ತು ಬದರಿನಾಥ ದರ್ಶನ ಪಡೆದಿದ್ದರು. ಬಳಿಕ ಅವರು ಅಕ್ಟೋಬರ್ 23 ರಂದು ಅಯೋಧ್ಯೆಯ ದೀಪೋತ್ಸವದಲ್ಲಿ ಭಾಗವಹಿಸಿದರು. ಈಗ ಲಡಾಖ್ನ ಕಾರ್ಗಿಲ್ಗೆ ಭೇಟಿ ನೀಡಿರುವ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ.
ಓದಿ: ದೀಪಾವಳಿ ಮುನ್ನಾದಿನ ರಾತ್ರಿ ಜನರ ಜೀವನದಲ್ಲಿ ಬಹಳ ಖುಷಿ ತಂದಿದ್ದೀರಿ: ಅನುಷ್ಕಾ ಪ್ರಶಂಸೆ